ನವದೆಹಲಿ: ಹೊಂದಾಣಿಕೆಯ ಆಟವಾಡಿದ ಭಾರತ ಬಾಲಕರ ತಂಡದವರು 17 ವರ್ಷದೊಳಗಿನವರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕೊಲಂಬೊದಲ್ಲಿ ಗುರುವಾರ ನಡೆದ ಫೈನಲ್‌ನಲ್ಲಿ ಭಾರತ, 4–0 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು. ಲೀಗ್ ಹಂತದಲ್ಲಿ ಇದೇ ತಂಡದ ಕೈಯಲ್ಲಿ ಭಾರತ 1–3 ರಲ್ಲಿ ಸೋಲು ಅನುಭವಿಸಿತ್ತು. ಆದರೆ ಫೈನಲ್‌ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿ ಸತತ ಎರಡನೇ ಬಾರಿ ಚಾಂಪಿಯನ್ ಆಯಿತು.
ಬಾಬಿ ಸಿಂಗ್, ಕೊರೌ ಸಿಂಗ್, ನಾಯಕ ವನ್ಲಾಲ್‌ಪೆಕ ಗುಯಿಟೆ ಮತ್ತು ಅಮನ್ ಅವರು ಗೋಲು ಗಳಿಸಿದರು.
ಪಂದ್ಯದ ಆರಂಭದಿಂದಲೇ ಎದುರಾಳಿ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಭಾರತ, 18ನೇ ನಿಮಿಷದಲ್ಲಿ ಮುನ್ನಡೆ ಗಳಿಸಿತು. ಗುಯಿಟೆ ಅವರು ನೀಡಿದ ಕ್ರಾಸ್‌ನಲ್ಲಿ ಬಾಬಿ, ಹೆಡ್ ಮಾಡಿ ಚೆಂಡನ್ನು ಗುರಿ ಸೇರಿಸಿದರು.
30ನೇ ನಿಮಿಷದಲ್ಲಿ ಕೊರೌ ಸಿಂಗ್, ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ನಾಯಕ ಗುಯಿಟೆ ಅವರ ನಿಖರ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡು ಗೋಲು ಗಳಿಸಿದರು.
ಹಿನ್ನಡೆ ಅನುಭವಿಸಿದ ಎದುರಾಳಿ ತಂಡ ಒರಟಾದ ಆಟವಾಡಿತು. 39ನೇ ನಿಮಿಷದಲ್ಲಿ ನೇಪಾಳ ತಂಡದ ನಾಯಕ ಪ್ರಶಾಂತ್ ಅವರು ಭಾರತದ ಡ್ಯಾನಿ ಲೈಶ್ರಾಮ್ ಅವರ ಬೆನ್ನಿಗೆ ಮೊಣಕೈಯಿಂದ ಗುದ್ದಿ ಕೆಳಕ್ಕೆ ಬೀಳಿಸಿದರು. ರೆಫರಿ ರೆಡ್ ಕಾರ್ಡ್ ತೋರಿಸಿ ಪ್ರಶಾಂತ್ ಅವರನ್ನು ಹೊರಕ್ಕೆ ಕಳುಹಿಸಿದರು. ಇದರಿಂದ ಬಳಿಕದ ಅವಧಿಯಲ್ಲಿ ನೇಪಾಳ 10 ಮಂದಿಯೊಂದಿಗೆ ಆಡಬೇಕಾಯಿತು.
ವಿರಾಮದ ವೇಳೆಗೆ 2–0 ರಲ್ಲಿ ಮುನ್ನಡೆಯಲ್ಲಿದ್ದ ಭಾರತ, ಎರಡನೇ ಅವಧಿಯಲ್ಲೂ ಪ್ರಭುತ್ವ ಮುಂದುವರಿಸಿತು. ಮೊದಲ ಎರಡು ಗೋಲುಗಳಿಗೆ ನೆರವಾಗಿದ್ದ ಗುಯಿಟೆ 63ನೇ ನಿಮಿಷದಲ್ಲಿ ತಾವೇ ಗೋಲು ಗಳಿಸಿದರು. ಎರಡನೇ ಅವಧಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಅಮನ್, ಭಾರತದ ನಾಲ್ಕನೇ ಗೋಲು ತಂದಿತ್ತರು.
ಗುಯಿಟೆ ‘ಟೂರ್ನಿಯ ಶ್ರೇಷ್ಠ ಆಟಗಾರ’ ಪ್ರಶಸ್ತಿ ಪಡೆದರೆ, ಗೋಲ್‌ಕೀಪರ್ ಸಾಹಿಲ್ ‘ಶ್ರೇಷ್ಠ ಗೋಪ್‌ಕೀಪರ್’ ಗೌರವಕ್ಕೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.