ನವದೆಹಲಿ: ಎಎಫ್‌ಸಿ 16 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಭಾರತದ ಬಾಲಕರ ತಂಡಕ್ಕೆ ಈ ಹಾದಿಯಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.
ಗುರುವಾರ ಚಾಂಪಿಯನ್‌ಷಿಪ್‌ನ ಡ್ರಾ ಪ್ರಕಟವಾಗಿದ್ದು, ಭಾರತವು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಹಾಗೂ ಉಜ್ಬೆಕಿಸ್ತಾನದಂತಹ ಬಲಿಷ್ಠ ತಂಡಗಳೂ ಇದೇ ಗುಂಪಿನಲ್ಲಿವೆ.
ಇದೇ ವರ್ಷದ ಸೆಪ್ಟೆಂಬರ್ 16ರಿಂದ ಅಕ್ಟೋಬರ್ 3ರವರೆಗೆ ಬಹ್ರೇನ್‌ನಲ್ಲಿ ಚಾಂಪಿಯನ್‌ಷಿಪ್ ಆಯೋಜನೆಯಾಗಿದೆ. ಇದರಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳು 2021ರಲ್ಲಿ ಪೆರು ದೇಶದಲ್ಲಿ ನಡೆಯುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ.
ಭಾರತ ತಂಡವು ಹೋದ ವರ್ಷ ತಾಷ್ಕೆಂಟ್‌ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು. ತಂಡವು ಮೂರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಕಲೆಹಾಕಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಇದರೊಂದಿಗೆ ಸತತ ಮೂರನೇ ಬಾರಿ ಎಎಫ್‌ಸಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿತ್ತು. ಭಾರತವು ಒಟ್ಟಾರೆ ಒಂಬತ್ತನೇ ಬಾರಿ ಟೂರ್ನಿಯಲ್ಲಿ ಆಡುವ ಅವಕಾಶ ಗಳಿಸಿದೆ.
‘ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿರುವ ಎಲ್ಲಾ ತಂಡಗಳೂ ಬಲಿಷ್ಠವಾಗಿವೆ. ಹೀಗಾಗಿ ಎಲ್ಲರಿಗೂ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಹಿಂದಿನ ಕೆಲ ವರ್ಷಗಳಿಂದ ನಮ್ಮ ತಂಡವು ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಡುತ್ತಿದೆ. ಎಎಫ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ಆಟಗಾರರು ಶ್ರೇಷ್ಠ ಆಟ ಆಡುವ ವಿಶ್ವಾಸ ಇದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಬಿಬಿಯಾನೊ ಫರ್ನಾಂಡಿಸ್ ನುಡಿದಿದ್ದಾರೆ.
‘ಹೋದ ವರ್ಷ ಉಜ್ಬೆಕಿಸ್ತಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಆ ತಂಡಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದೆವು. ಆ ತಂಡದಲ್ಲಿ ಈಗ ಸಾಕಷ್ಟು ಬದಲಾವಣೆ ಆಗಿರಲಿದೆ. ಅವರು ಹೊಸ ರಣನೀತಿಯೊಂದಿಗೆ ಕಣಕ್ಕಿಳಿಯುವುದು ನಿಶ್ಚಿತ. ಅವರನ್ನು ಎದುರಿಸಲು ನಾವು ಸಕಲ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ’ ಎಂದಿದ್ದಾರೆ.
2018ರಲ್ಲಿ ನಡೆದಿದ್ದ ಎಎಫ್‌ಸಿ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾ ಎದುರು ಮಣಿದಿತ್ತು. ಹೀಗಾಗಿ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸುವ ಅವಕಾಶ ಕೈತಪ್ಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.