ADVERTISEMENT

ಇಂಡಿಯನ್ ಸೂಪರ್ ಲೀಗ್: ಹ್ಯಾಟ್ರಿಕ್ ಜಯದ ಮೇಲೆ ಬೆಂಗಳೂರು ಬಿಎಫ್‌ಸಿ ಕಣ್ಣು

ಕಂಠೀರವ ಕ್ರೀಡಾಂಗಣದಲ್ಲಿ ಚೆಟ್ರಿ ಬಳಗಕ್ಕೆ ಮೋಹನ್ ಬಾಗನ್ ಸವಾಲು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 13:39 IST
Last Updated 27 ಸೆಪ್ಟೆಂಬರ್ 2024, 13:39 IST
<div class="paragraphs"><p>ಬಿಎಫ್‌ಸಿಯ ಸುನಿಲ್ ಚೆಟ್ರಿ ಮತ್ತು ರಾಹುಲ್ ಭೆಕೆ&nbsp; –ಪ್ರಜಾವಾಣಿ ಚಿತ್ರ</p></div>

ಬಿಎಫ್‌ಸಿಯ ಸುನಿಲ್ ಚೆಟ್ರಿ ಮತ್ತು ರಾಹುಲ್ ಭೆಕೆ  –ಪ್ರಜಾವಾಣಿ ಚಿತ್ರ

   

ಬೆಂಗಳೂರು: ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿರುವ ಬೆಂಗಳೂರು ಎಫ್‌ಸಿ ತಂಡವು ಶನಿವಾರ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್‌ ಜೈಂಟ್ಸ್‌ ಎದುರು ಸೆಣಸಲಿದೆ. ‘ಹ್ಯಾಟ್ರಿಕ್’ ಜಯದ ನಿರೀಕ್ಷೆಯಲ್ಲಿದೆ.

ಈ ಪಂದ್ಯವು ಕಂಠೀರವ ಕ್ರೀಡಾಂಗಣದಲ್ಲಿ ವಾರಾಂತ್ಯದ ದಿನದಂದು ಫುಟ್‌ಬಾಲ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಉಣಬಡಿಸುವ ನಿರೀಕ್ಷೆ ಇದೆ. 

ADVERTISEMENT

ಫುಟ್‌ಬಾಲ್ ಪ್ರಿಯರ ಕಣ್ಮಣಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ತಂಡವು ಇದುವರೆಗೆ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಜಯಿಸಿದೆ. ಈಸ್ಟ್ ಬೆಂಗಾಲ್ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳ ಎದುರಿನ ಪಂದ್ಯಗಳಲ್ಲಿ ಗೆದ್ದಿದೆ.  ಮೋಹನ್ ಬಾಗನ್ ತಂಡವೂ ಎರಡು ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಎಫ್‌ಸಿ ಎದುರು ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ನಾರ್ಥ್‌ ಈಸ್ಟ್‌ ಯುನೈಟೆಡ್ ಎದುರು ಜಯದ ಹಾದಿಗೆ ಮರಳಿತ್ತು. 

ಜೆರಾರ್ಡ್ ಝರಗೋಜಾ ಅವರು ತಂಡದ ಮ್ಯಾನೇಜರ್ ಆದ ನಂತರ ಬಿಎಫ್‌ಸಿ ತಂಡವು ತವರಿನಲ್ಲಿ  9 ಪಂದ್ಯಗಳನ್ನು ಆಡಿದೆ. ಅದರಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಹೋದ ಬಾರಿಯ ಟೂರ್ನಿಯಲ್ಲಿ ಇದೇ ಮೋಹನ್ ಬಾಗನ್ ವಿರುದ್ಧ ಸೋತಿತ್ತು. 

ಉಭಯ ತಂಡಗಳು ಐಎಸ್‌ಎಲ್‌ ಇತಿಹಾಸದಲ್ಲಿ 9 ಸಲ ಮುಖಾಮುಖಿಯಾಗಿವೆ. ಬೆಂಗಳೂರು ತಂಡವು ಕೇವಲ ಒಂದರಲ್ಲಿ ಜಯಿಸಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. 6 ಪಂದ್ಯಗಳನ್ನು ಬಾಗನ್ ಜಯಿಸಿದೆ. 

ರಾಹುಲ್ ಭೆಕೆ, ಚೆಟ್ರಿ, ವಿನಿತ್ ಹಾಗೂ ಗೋಲ್‌ಕೀಪರ್ ಗುರುಭಕ್ಸ್‌ ಸಿಂಗ್ ಸಂಧು ಅವರು ಇರುವ ಬಿಎಫ್‌ಸಿ ತಂಡವು ಬಲಿಷ್ಠವಾಗಿದೆ. ರಾಹುಲ್ ಅವರು ಹೈದರಾಬಾದ್ ಎದುರಿನ ಪಂದ್ಯದಲ್ಲಿ 102 ಬಾರಿ ಟಚ್‌ ದಾಖಲೆ ಬರೆದರು. ಈ ಹಿಂದೆ ಜಯ್ ಗುಪ್ತಾ ಅವರೊಬ್ಬರೇ 100ಕ್ಕೂ ಹೆಚ್ಚು ಟಚ್‌ ಮಾಡಿದ್ದ ದಾಖಲೆ ಹೊಂದಿದ್ದರು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18. ಜಿಯೊ ಸಿನೆಮಾ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.