ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 16:21 IST
Last Updated 20 ಸೆಪ್ಟೆಂಬರ್ 2023, 16:21 IST
ಅಭ್ಯಾಸದಲ್ಲಿ ನಿರತವಾಗಿರುವ ಬೆಂಗಳೂರು ಎಫ್‌ಸಿ ತಂಡದ ಆಟಗಾರರು
ಅಭ್ಯಾಸದಲ್ಲಿ ನಿರತವಾಗಿರುವ ಬೆಂಗಳೂರು ಎಫ್‌ಸಿ ತಂಡದ ಆಟಗಾರರು   

ಮುಂಬೈ: ಪ್ರಸಕ್ತ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿ ಗುರುವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

10ನೇ ಆವೃತ್ತಿಯ ಮೊದಲ ಪಂದ್ಯಕ್ಕೆ ಕೊಚ್ಚಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣ ಸಜ್ಜಾಗಿದೆ. ಈ ಮಧ್ಯೆ ಏಷ್ಯನ್ ಕ್ರೀಡಾಕೂಟ ಚೀನಾದಲ್ಲಿ ಆರಂಭವಾಗಿದೆ. ಬೆಂಗಳೂರು ಎಫ್‌ಸಿ ತಂಡದ ಸುನಿಲ್‌ ಚೆಟ್ರಿ ಅವರು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪುರುಷರ ಪುಟ್‌ಬಾಲ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ಚೆಟ್ರಿ ಅವರ ಅನುಪಸ್ಥಿತಿಯಲ್ಲಿ ಬೆಂಗಳೂರು ಎಫ್‌ಸಿ ತಂಡವು ಕಣಕ್ಕೆ ಇಳಿಯಲಿದೆ. ಬ್ಲಾಸ್ಟರ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಜಯದೊಂದಿಗೆ ಪ್ರಾರಂಭಿಸಲು ಬೆಂಗಳೂರು ತಂಡವು ಎದುರು ನೋಡುತ್ತಿದೆ. ಹಿಂದಿನ ಆವೃತ್ತಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಗೋಲು ವಿಷಯದಲ್ಲಿ ವಿವಾದವಾಗಿ, ಪ್ರತಿಭಟನೆ ನಡೆದು ತಂಡಗಳು ವಾಕ್‌ಔಟ್ ನಡೆಸಿದ್ದವು.

ADVERTISEMENT

‘ಈ ಆವೃತ್ತಿಯಲ್ಲಿ ನಾವು ಹೊಂದಿರುವ ತಂಡದಿಂದ ನಿಜವಾಗಿಯೂ ಸಂತಸಗೊಂಡಿದ್ದೇನೆ. ನಮ್ಮೊಂದಿಗೆ ಸೇರಿಕೊಂಡ ವಿದೇಶಿ ಆಟಗಾರರು ತಂಡಕ್ಕೆ ಬಲ ತುಂಬಲಿದ್ದಾರೆ. ಈ ಋತುವಿನಲ್ಲಿ ಸ್ಪರ್ಧಾತ್ಮಕ ಸವಾಲನ್ನು ಎದುರು ನೋಡುತ್ತಿದ್ದೇವೆ’ ಎಂದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ತಿಳಿಸಿದ್ದಾರೆ.

‘ಬಿಎಫ್‌ಸಿ ತಂಡವು 6 ವಿದೇಶಿ ಆಟಗಾರರನ್ನು ಹೊಂದಿದ್ದು, ನಿರ್ದಿಷ್ಟ ಸಮಯದಲ್ಲಿ ನಾಲ್ವರನ್ನು ಮಾತ್ರ ಆಡಿಸಬಹುದು. ಆದರೆ, ಮೂವರು ವಿದೇಶಿ ಆಟಗಾರರು ಸೇರಿದಂತೆ ಸ್ಪರ್ಧಾತ್ಮಕ ತಂಡವನ್ನು ಆಯ್ಕೆ ಮಾಡಿ, ಬಲಿಷ್ಠ ಕೇರಳ ಬ್ಲಾಸ್ಟರ್ಸ್‌ ಎದುರು ಜಯ ದಾಖಲಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಸಕ್ತ ವರ್ಷ ಬಿಎಫ್‌ಸಿ ತಂಡ ಸೇರಿರುವ ಕರ್ಟಿಸ್ ಮೇನ್ ಅವರು ಕ್ಲಬ್‌ನ ಅಗ್ರ ಸ್ಕೋರರ್ ಶಿವಶಕ್ತಿ ನಾರಾಯಣನ್ ಜೊತೆಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ. ಗುರುವಾರದ ಪಂದ್ಯಕ್ಕಾಗಿ ಸೈಮನ್‌ ಅವರು 11 ಮಂದಿಯ ತಂಡವನ್ನು ಯಾವ ರೀತಿ ಜೋಡಿಸುತ್ತಾರೆ ಎಂಬ ಕುತೂಹಲವಿದೆ.

ಈ ಮಧ್ಯೆ ಬ್ಲಾಸ್ಟರ್ಸ್ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಪ್ರೀತಮ್ ಕೋಟಾಲ, ಪ್ರಬೀರ್ ದಾಸ್, ಮಿಲೋಸ್ ಡ್ರಿನ್ಸಿಕ್, ಡೈಸುಕೆ ಸಕಾಯ್ ಮತ್ತು ಕ್ವಾಮೆ ಪೆಪ್ರಾಹ್ ತಂಡವನ್ನು ಸೇರಿಕೊಂಡಿದ್ದಾರೆ. ತಂಡದ ಮುಖ್ಯ ಕೋಚ್‌ ಇವಾನ್‌ ವುಕೊಮಾನೊವಿಚ್‌ ಅವರು ನಿಷೇಧದ ಕಾರಣ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಸಹಾಯಕ ಕೋಚ್‌ ಫ್ರಾಂಕ್ ಡಾವೆನ್ ಕೊಚ್ಚಿಯಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

2017ರಿಂದ ಬಿಎಫ್‌ಸಿ ಮತ್ತು ಬ್ಲಾಸ್ಟರ್‌ ತಂಡಗಳು ಇಂಡಿಯನ್ ಸೂಪರ್ ಲೀಗ್‌ನಲ್ಲಿ 13 ಬಾರಿ ಮುಖಾಮುಖಿಯಾಗಿದ್ದು, ಬಿಎಫ್‌ಸಿ ತಂಡ 8 ಬಾರಿ ಜಯ ಗಳಿಸಿದ ದಾಖಲೆ ಹೊಂದಿದೆ.

ಬೆಂಗಳೂರು ಎಫ್‌ಸಿ ತಂಡವು ಎರಡನೇ ಪಂದ್ಯದಲ್ಲಿ (ಸೆ.27) ಹಾಲಿ ಚಾಂಪಿಯನ್‌ ಮೋಹನ್ ಬಾಗನ್ ಸೂಪರ್ ಜೈಂಟ್ ವಿರುದ್ಧ ಪೈಪೋಟಿ ನಡೆಸಲಿದೆ. ಬೆಂಗಳೂರು ತಂಡವು ತವರಿನಲ್ಲಿ ಅ.4ರಂದು ಈಸ್ಟ್‌ ಬೆಂಗಾಲ್‌ ಎಫ್‌ಸಿ ವಿರುದ್ಧ ಆಡಲಿದೆ.

ಪಂದ್ಯದ ಸಮಯ: ರಾತ್ರಿ 8

ನೇರಪ್ರಸಾರ: ಜಿಯೊ ಸಿನಿಮಾ, ಸ್ಪೋರ್ಟ್ಸ್‌ ನೆಟ್‌ವರ್ಕ್‌ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.