ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದ್ದಾರೆ.
ಬೆಂಗಳೂರಿನ ತಂಡ ಈ ಋತುವಿನಲ್ಲಿ ಒಮ್ಮೆಯೂ ಸತತ ಎರಡು ಪಂದ್ಯ ಗೆದ್ದಿಲ್ಲ. ಇದೀಗ ಸತತ ಎರಡನೇ ಜಯದ ನಿರೀಕ್ಷೆಯೊಂದಿಗೆ ಕಂಠೀರವ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.
ಕಳೆದ ವಾರ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ ತಂಡ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ದ ಗೆದ್ದಿತ್ತು. ಪ್ಲೇ ಆಫ್ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲೂ ಜಯ ಅನಿವಾರ್ಯ.
13 ಪಂದ್ಯಗಳಿಂದ ಅಷ್ಟೇ ಅಂಕಗಳನ್ನು ಹೊಂದಿರುವ ಬಿಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 22 ಪಾಯಿಂಟ್ಸ್ ಹೊಂದಿರುವ ಒಡಿಶಾ ಐದನೇ ಸ್ಥಾನದಲ್ಲಿದೆ. ಬೆಂಗಳೂರಿನ ತಂಡ ಕಳೆದ ಐದು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ.
‘ಪ್ಲೇ ಆಫ್ ಹಂತ ಪ್ರವೇಶಿಸಲು ಬೇಕಾದಷ್ಟು ಪಾಯಿಂಟ್ಸ್ ಕಲೆಹಾಕಲು ನಮಗೆ ಇನ್ನೂ ಅವಕಾಶವಿದೆ. ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿ. ಅದರಲ್ಲಿ ವಿಫಲವಾದರೆ ನಿಜಕ್ಕೂ ನಿರಾಸೆಯಾಗಲಿದೆ’ ಎಂದು ಬಿಎಫ್‌ಸಿ ಕೋಚ್ ಸೈಮನ್ ಗ್ರೇಸನ್ ಹೇಳಿದ್ದಾರೆ.
ಒಡಿಶಾ ತಂಡವು ನಂದಕುಮಾರ್ ಮತ್ತು ಬ್ರೆಜಿಲ್‌ನ ಡಿಯಾಗೊ ಮೌರಿಸಿಯೊ ಅವರನ್ನು ನೆಚ್ಚಿಕೊಂಡಿದೆ. ನಂದಕುಮಾರ್ ಅವರು ಈ ಋತುವಿನಲ್ಲಿ ಐದು ಗೋಲು ಗಳಿಸಿದ್ದಾರೆ.
ಪಂದ್ಯ ಆರಂಭ: ಸಂಜೆ 5.30
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.