ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಸವಾಲು ಇಂದು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 23:55 IST
Last Updated 7 ನವೆಂಬರ್ 2024, 23:55 IST
<div class="paragraphs"><p>ಬಿಎಫ್‌ಸಿ ನಾಯಕ ಸುನಿಲ್‌ ಚೆಟ್ರಿ</p></div>

ಬಿಎಫ್‌ಸಿ ನಾಯಕ ಸುನಿಲ್‌ ಚೆಟ್ರಿ

   

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಎದುರಾದ ಸೋಲಿನ ಆಘಾತದಿಂದ ಹೊರಬರುವ ಯತ್ನದಲ್ಲಿರುವ ಬಿಎಫ್‌ಸಿ ತಂಡ ಶುಕ್ರವಾರ ತವರಿನಲ್ಲಿ ನಡೆಯುವ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡವನ್ನು ಎದುರಿಸಲಿದೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ತಂಡ ಲೀಗ್‌ನಲ್ಲಿ ಐದು ಗೆಲುವು, ಒಂದು ಡ್ರಾ, ಒಂದು ಸೋಲಿನೊಡನೆ ಏಳು ಪಂದ್ಯಗಳಿಂದ 16 ಪಾಯಿಂಟ್ಸ್‌ ಸಂಗ್ರಹಿಸಿದೆ. ಸತತ ಆರು ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದ ಬೆಂಗಳೂರು ಎಫ್‌ಸಿ ತಂಡದ ಯಶಸ್ಸಿನ ಓಟಕ್ಕೆ ಭಾನುವಾರ ಎಫ್‌ಸಿ ಗೋವಾ ತಂಡ ತಡೆಹಾಕಿತ್ತು. ಮಡಗಾಂವ್‌ನಲ್ಲಿ ಆತಿಥೇಯರು 3–0 ಯಿಂದ ಗೆದ್ದಿದ್ದರು. ಆ ಹಿನ್ನಡೆ ಹೊರತಾಗಿಯೂ ಗೆರಾರ್ಡ್‌ ಜರಗೋಜಾ ತರಬೇತಿಯ ತಂಡ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ADVERTISEMENT

ಆದರೆ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕಳೆದ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ ನಾರ್ತ್‌ ಈಸ್ಟ್‌ ತಂಡ 3–2 ಗೋಲುಗಳಿಂದ ಜಯಿಸಿತ್ತು. ಅಲ್ಲದೇ ಈ ಲೀಗ್‌ನಲ್ಲಿ ನಾರ್ತ್‌ಈಸ್ಟ್‌ ಒಟ್ಟು 17 ಗೋಲುಗನ್ನು ಬಾರಿಸಿದೆ. ಲೀಗ್‌ನಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಿದೆ. ಬೆಂಗಳೂರು ಎಫ್‌ಸಿ 7 ಪಂದ್ಯಗಳಿಂದ 11 ಗೋಲು ಹೊಡೆದಿದೆ.

ನಾರ್ತ್‌ ಈಸ್ಟ್‌ ತಂಡ 7 ಪಂದ್ಯಗಳಿಂದ 3 ಗೆಲುವು ಮತ್ತು 2 ಡ್ರಾಗಳೊಂದಿಗೆ ಒಟ್ಟು 11 ಅಂಕ ಗಳಿಸಿ ಪಾಯಿಂಟ್‌ ಪಟ್ಟಿಯಲ್ಲಿ ಆರನೆ ಸ್ಥಾನ ಪಡೆದಿದೆ. ಆದರೆ ತವರಿನಿಂದ ಹೊರಗಿನ ಪಂದ್ಯಗಳಲ್ಲಿ ಅದರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ತವರಿನಿಂದಾಚೆ ಆಡಿದ ಕಡೆಯ 31 ಐಎಸ್‌ಎಲ್‌ ಪಂದ್ಯಗಳಲ್ಲಿ ಅದು ಎರಡು ಗೆದ್ದು, 9 ಡ್ರಾ ಮಾಡಿ ಕೊಂಡಿದೆ. 20 ಪಂದ್ಯಗಳಲ್ಲಿ ಸೋತಿದೆ.

ಬಿಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈ ಹಿಂದೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದು ಮತ್ತೆ ಅಮೋಘ ಪ್ರದರ್ಶನದ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೊ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.