ಬೆಂಗಳೂರು: ಮೊದಲು ದೆಶೋರ್ನ್ ಬ್ರೌನ್, ನಂತರ ರಾಹುಲ್ ಭೆಕೆ, ತದನಂತರ ಸುನಿಲ್ ಚೆಟ್ರಿ..ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಒಡಿಶಾ ಎಫ್‌ಸಿ ತಂಡದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದ ಈ ತಾರೆಯರು ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಇವರ ಕಾಲ್ಚಳಕದ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 3–0 ಗೋಲುಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು 25ಕ್ಕೆ ಹೆಚ್ಚಿಸಿಕೊಂಡು ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.
ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಒಡಿಶಾ ತಂಡ ಸುನಿಲ್ ಚೆಟ್ರಿ ಪಡೆಯ ಎದುರು ಸಂಪೂರ್ಣವಾಗಿ ಮಂಕಾಯಿತು.
ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದ ಬೆಂಗಳೂರಿನ ತಂಡ ಆರಂಭದ ಹತ್ತು ನಿಮಿಷಗಳಲ್ಲಿ ಎದುರಾಳಿಗಳಿಂದ ತೀವ್ರ ಪ್ರತಿರೋಧ ಎದುರಿಸಿತು. ನಂತರ ಚೆಟ್ರಿ ಬಳಗ ಆಧಿಪತ್ಯ ಸಾಧಿಸಿತು. 15ನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಜಮೈಕಾದ ದೆಶೋರ್ನ್ ಬ್ರೌನ್ ಹಾಳು ಮಾಡಿದರು. ಹೀಗಿದ್ದರೂ ಬಿಎಫ್‌ಸಿ ಎದೆಗುಂದಲಿಲ್ಲ.
ಮೂರು ನಿಮಿಷ ಎರಡು ಗೋಲು: 20ನೇ ನಿಮಿಷದ ಬಳಿಕ ಆಟದ ವೇಗಹೆಚ್ಚಿಸಿಕೊಂಡ ಹಾಲಿ ಚಾಂಪಿಯನ್ನರು ಮೂರುನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿ ಮೈದಾನದಲ್ಲಿ ಮೆಕ್ಸಿಕನ್ ಅಲೆ ಏಳುವಂತೆ ಮಾಡಿದರು.
23ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಬ್ರೌನ್, ಆತಿಥೇಯರ ಖಾತೆ ತೆರೆದರು. ಫ್ರೀ ಕಿಕ್‌ನಲ್ಲಿ ದಿಮಾಸ್ ಡೆಲ್ಗಾಡೊ ಒದ್ದ ಚೆಂಡನ್ನು ಎರಿಕ್ ಪಾರ್ಟಲು ತಲೆತಾಗಿಸಿ (ಹೆಡರ್) ಗುರಿಯತ್ತ ತಳ್ಳಿದರು. ಎದುರಾಳಿ ಆವರಣದ ಸನಿಹವೇ ಇದ್ದ ಬ್ರೌನ್ ಅದನ್ನು ಕಾಲಿನಿಂದ ‘ಫ್ಲಿಕ್’ ಮಾಡಿ, ಕ್ಷಣ ಮಾತ್ರದಲ್ಲಿ ಗುರಿ ಸೇರಿಸಿಬಿಟ್ಟರು.
ಈ ಸಂಭ್ರಮ ಮರೆಯಾಗುವ ಮುನ್ನವೇ ರಾಹುಲ್ ಭೆಕೆ, ತವರಿನ ಅಭಿಮಾನಿಗಳ ಖುಷಿ ಹೆಚ್ಚಿಸಿದರು. 25ನೇ ನಿಮಿಷದಲ್ಲಿ ಚಮತ್ಕಾರ ಮಾಡಿದ ಅವರು ಆತಿಥೇಯರ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.
ಉದಾಂತ ಸಿಂಗ್ ನೀಡಿದ ಕ್ರಾಸ್‌ನಲ್ಲಿ ಪಾರ್ಟಲು ಅವರು ಚೆಂಡನ್ನು ನಿಯಂತ್ರಣಕ್ಕೆ ಪಡೆಯುತ್ತಿದ್ದಂತೆ ಬಿಎಫ್‌ಸಿ ಆಟಗಾರನ ಬಳಿ ಧಾವಿಸಿ ಬಂದ ಒಡಿಶಾ ತಂಡದ ಅರಿದಾನೆ ಸಂಟಾನ ‘ಬ್ಲಾಕ್’ ಮಾಡಲು ಪ್ರಯತ್ನಿಸಿದರು.
ಸಂಟಾನ ಕಾಲನ್ನು ಸವರಿಕೊಂಡು ತಮ್ಮತ್ತ ಬಂದ ಚೆಂಡನ್ನು ರಾಹುಲ್, ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ಸಂಭ್ರಮಿಸಿದರು.
ವಿರಾಮದ ಬಳಿಕ ಬಿಎಫ್‌ಸಿ ಇನ್ನಷ್ಟು ಆತ್ಮವಿಶ್ವಾಸದಿಂದ ಆಡಿತು. 60ನೇ ನಿಮಿಷದಲ್ಲಿ ದಿಮಾಸ್ ಡೆಲ್ಗಾಡೊ ಕಾರ್ನರ್‌ನಿಂದ ಒದ್ದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಎರಿಕ್ ಪಾರ್ಟಲು ಅವರನ್ನು ಒಡಿಶಾ ತಂಡದ ಮಾರ್ಟಿನ್ ಗುಯಿಡೆಸ್ ಕೈಯಿಂದ ತಳ್ಳಿ ನೆಲಕ್ಕೆ ಬೀಳಿಸಿದರು. ಹೀಗಾಗಿ ರೆಫರಿ ಬಿಎಫ್‌ಸಿಗೆ ಪೆನಾಲ್ಟಿ ನೀಡಿದರು.
ಈ ಅವಕಾಶದಲ್ಲಿ ನಾಯಕ ಚೆಟ್ರಿ ಒದ್ದ ಚೆಂಡು ಎದುರಾಳಿ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಮೈದಾನದಲ್ಲಿ ನೀಲಿ ಧ್ವಜಗಳು ರಾರಾಜಿಸಿದವು. ಆ ಗೋಲಿನೊಂದಿಗೆ ಬಿಎಫ್‌ಸಿಯ ಗೆಲುವು ಖಾತ್ರಿಯಾಯಿತು. ನಂತರದ ಅವಧಿಯಲ್ಲಿ ಎದುರಾಳಿ ಆಟಗಾರರು ಗೋಲುಪೆಟ್ಟಿಗೆಯ ಸನಿಹಕ್ಕೆ ಸುಳಿಯದಂತೆ ತಡೆದ ಚೆಟ್ರಿ ಪಡೆ ಖುಷಿಯ ಕಡಲಲ್ಲಿ ತೇಲಿತು.
ಇಂದಿನ ಪಂದ್ಯ
ಚೆನ್ನೈಯಿನ್ ಎಫ್‌ಸಿ–ಜೆಮ್‌ಶೆಡ್‌ಪುರ ಎಫ್‌ಸಿ
ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಚೆನ್ನೈ
ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.