ADVERTISEMENT

ಗಿನಿ ಫುಟ್‌ಬಾಲ್‌ ಆಟಗಾರರಿಗೆ ನಿಂದನೆ: ಕ್ಷಮೆ ಯಾಚಿಸಿದ ಇಂಡೊನೇಷ್ಯಾ

​ಪ್ರಜಾವಾಣಿ ವಾರ್ತೆ
Published 10 ಮೇ 2024, 14:01 IST
Last Updated 10 ಮೇ 2024, 14:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜಕಾರ್ತಾ: ಗಿನಿ ದೇಶದ ಆಟಗಾರರ ವಿರುದ್ಧ ಇಂಡೊನೇಷ್ಯಾ ಫುಟ್‌ಬಾಲ್‌ ಅಭಿಮಾನಿಗಳು  ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ಮಾಡಿದ್ದಕ್ಕೆ ಆ ದೇಶದ ಫುಟ್‌ಬಾಲ್‌ ಸಂಸ್ಥೆ ಶುಕ್ರವಾರ ಕ್ಷಮೆ ಯಾಚಿಸಿದೆ. ಗಿನಿ ದೇಶದ ಎದುರು ಪ್ಲೇ ಆಫ್‌ ಪಂದ್ಯದಲ್ಲಿ ಸೋತ ಕಾರಣ ಒಲಿಂಪಿಕ್ಸ್‌ನಲ್ಲಿ ಆಡುವ ಇಂಡೊನೇಷ್ಯಾದ ಕನಸು ಭಗ್ನಗೊಂಡಿತ್ತು.

ಫ್ರಾನ್ಸ್‌ನ ಕ್ಲೇರ್‌ಫೊಂಟೇನ್‌ನಲ್ಲಿ ನಡೆದ ಪಂದ್ಯದಲ್ಲಿ 23 ವರ್ಷದೊಳಗಿನವರ ಗಿನಿ ತಂಡ 1–0 ಗೋಲಿನಿಂದ ಇಂಡೊನೇಷ್ಯಾ ತಂಡವನ್ನು ಸೋಲಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಸ್ಪ್ಯಾನಿಷ್‌ ಲೀಗ್‌ನಲ್ಲಿ ಗೆಟಾಫೆ ಪರ ಆಡುವ ಇಲೈಕ್ಸ್‌ ಮೊರಿಬಾ ‘ಪೆನಾಲ್ಟಿ’ಯಲ್ಲಿ ಗೋಲು ಗಳಿಸಿ ಗಿನಿ ಗೆಲುವಿಗೆ ನೆರವಾಗಿದ್ದರು.

ADVERTISEMENT

ಇಂಡೊನೇಷ್ಯಾ ಗೆದ್ದಲ್ಲಿ 1956ರ (ಮೆಲ್ಬರ್ನ್‌ ಕ್ರೀಡೆಗಳ) ನಂತರ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಂತೆ ಆಗುತಿತ್ತು.

ಆಫ್ರಿಕ ಖಂಡದ ಗಿನಿ, ಒಲಿಂಪಿಕ್ಸ್‌ ಪ್ರವೇಶ ಖಚಿತಪಡಿಸಿಕೊಂಡ ಬೆನ್ನಲ್ಲೇ ಇಂಡೊನೇಷ್ಯಾ ಫುಟ್‌ಬಾಲ್‌ಪ್ರಿಯರು ಸಾಮಾಜಿಕ ಜಾಲ ತಾಣಗಳಲ್ಲಿ ಎದುರಾಳಿ ತಂಡದ ಪ್ರಮುಖ ಆಟಗಾರರ ವಿರುದ್ಧ ನಿಂದನೆಗಳ ಮಹಾಪೂರ ಹರಿಸಿದ್ದರು.

‘ಸೋಲನ್ನು ಗೌರವದಿಂದ ಸ್ವೀಕರಿಸಿ ಆಟಗಾರರು ತವರಿಗೆ ಮರಳುತ್ತಿದ್ದಾರೆ. ಅಭಿಮಾನಿಗಳೂ ಹಾಗೇ ಮಾಡುವರೆಂಬ ವಿಶ್ವಾಸವಿದೆ’ ಎಂದು ಫುಟ್‌ಬಾಲ್‌ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಆರ್ಯ ಮಹೇಂದ್ರ ಸಿನುಲಿಂಗ ಹೇಳಿದ್ದಾರೆ.

‘ತನ್ನ ದೇಶದ ಅಭಿಮಾನಿಗಳ ಜನಾಂಗೀಯ ನಿಂದನೆಯ ಪೋಸ್ಟ್‌ಗಳಿಗೆ ಇಂಡೊನೇಷ್ಯಾ ವಿಷಾದ ವ್ಯಕ್ತಪಡಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.