ADVERTISEMENT

ಇಂಡೊನೇಷ್ಯಾ ಕ್ರೀಡಾಂಗಣ ದುರಂತ: ಇಬ್ಬರಿಗೆ ಜೈಲು

ಏಜೆನ್ಸೀಸ್
Published 9 ಮಾರ್ಚ್ 2023, 19:31 IST
Last Updated 9 ಮಾರ್ಚ್ 2023, 19:31 IST
ಇಂಡೊನೇಷ್ಯಾದ ಕ್ರೀಡಾಂಗಣದಲ್ಲಿ ನಡೆದಿದ್ದ ದುರಂತದ ದೃಶ್ಯ
ಇಂಡೊನೇಷ್ಯಾದ ಕ್ರೀಡಾಂಗಣದಲ್ಲಿ ನಡೆದಿದ್ದ ದುರಂತದ ದೃಶ್ಯ   

ಸುರಬಯಾ, ಇಂಡೊನೇಷ್ಯಾ: ಫುಟ್‌ಬಾಲ್‌ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಉಂಟಾಗಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡೊನೇಷ್ಯಾದ ನ್ಯಾಯಾಲಯ ಇಬ್ಬರು ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

ಮಾಲಾಂಗ್‌ನಲ್ಲಿರುವ ಕ್ರೀಡಾಂಗಣದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಹಿಂಸಾಚಾರ ಮತ್ತು ಕಾಲ್ತುಳಿತ ಘಟನೆಯಲ್ಲಿ 40 ಮಕ್ಕಳು ಸೇರಿದಂತೆ 135 ಮಂದಿ ಮೃತಪಟ್ಟಿದ್ದರು.

ಅಂದು ನಡೆದಿದ್ದ ಪಂದ್ಯದ ಸಂಘಟಕ ಸಮಿತಿ ಮುಖ್ಯಸ್ಥ ಅಬ್ದುಲ್‌ ಹಾರಿಸ್‌ ಅವರಿಗೆ 18 ತಿಂಗಳ ಜೈಲು ಮತ್ತು ಭದ್ರತಾ ಅಧಿಕಾರಿ ಸುಕೊ ಸುತ್ರಿಸನೊ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇಬ್ಬರನ್ನೂ ಆರು ವರ್ಷ ಎಂಟು ತಿಂಗಳು ಜೈಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯವನ್ನು ಕೋರಿದ್ದರು.

ADVERTISEMENT

ದುರಂತದಲ್ಲಿ ಮಡಿದ ಕೆಲವರ ಕುಟುಂಬ ಸದಸ್ಯರು ಶಿಕ್ಷೆಯ ಪ್ರಮಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ್ಪಿನ ವಿರುದ್ಧ ಪ್ರಾಸಿಕ್ಯೂಟರ್‌ಗಳು ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

'ಈ ತೀರ್ಪಿನಿಂದ ನಿರಾಸೆಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಲಭಿಸಿಲ್ಲ‘ ಎಂದು ದುರಂತದಲ್ಲಿ ಇಬ್ಬರ ಪುತ್ರಿಯರನ್ನು ಕಳೆದುಕೊಂಡ ದೇವಿ ಅತೊಕ್ ಅವರು ಪ್ರತಿಕ್ರಿಯಿಸಿದ್ದಾರೆ.

ಕಂಜುರುಹಾನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಬಿಆರ್‌ಐ ಲೀಗ್‌ ಪಂದ್ಯದಲ್ಲಿ ಸ್ಥಳೀಯ ಅರೆಮಾ ಎಫ್‌ಸಿ ತಂಡವು 2–3 ಗೋಲುಗಳಿಂದ ಪೆರ್ಸೆಬಾಯಾ ಸುರಬಯಾ ತಂಡದ ಎದುರು ಸೋತಿತ್ತು. ಇದರಿಂದ ರೊಚ್ಚಿಗೆದ್ದ ಅರೆಮಾ ಎಫ್‌ಸಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಷೆಲ್‌ ಸಿಡಿಸಿದಾಗ ಉಂಟಾದ ಕಾಲ್ತುಳಿತದಿಂದಾಗಿ ದುರಂತ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.