ADVERTISEMENT

Euro Cup: ಸ್ಪೇನ್‌ಗೆ ಇಂದು ಕ್ರೊವೇಷಿಯಾ ಸವಾಲು

ಯುರೊ ಕಪ್‌ ಫುಟ್‌ಬಾಲ್‌

ಏಜೆನ್ಸೀಸ್
Published 14 ಜೂನ್ 2024, 16:22 IST
Last Updated 14 ಜೂನ್ 2024, 16:22 IST
   

ಬರ್ಲಿನ್‌: ಪೆದ್ರಿ ಗೊನ್ಸಾಲೆಝ್ ಅವರು ಲಯಕ್ಕೆ ಮರಳಿರುವುದು ಸ್ಪೇನ್‌ ತಂಡಕ್ಕೆ ಉತ್ಸಾಹ ಮೂಡಿಸಿದೆ. ಲುಕಾ ಮಾಡ್ರಿಕ್‌ ನೇತೃತ್ವದ ಕ್ರೊವೇಷಿಯಾ ತಂಡದ ವಿರುದ್ಧ ಶನಿವಾರ ನಡೆಯುವ ಯೂರೊ ಕಪ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಅವರ ಆಟವು ಸ್ಪೇನ್ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

38 ವರ್ಷ ವಯಸ್ಸಿನ ರಿಯಲ್ ಮ್ಯಾಡ್ರಿಡ್ ಮಿಡ್‌ಫೀಲ್ಡರ್‌ ಮಾಡ್ರಿಕ್ ಮತ್ತು ಪೆದ್ರಿ ನಡುವಣ ಮಿಡ್‌ಫೀಲ್ಡ್‌ನ ಪ್ರಾಬಲ್ಯಕ್ಕೆ ನಡೆಯುವ  ಹೋರಾಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

‘ಬಿ’ ಗುಂಪಿನಲ್ಲಿ ಸ್ಪೇನ್‌, ಕ್ರೊವೇಷಿಯಾ, ಇಟಲಿ, ಅಲ್ಬೇನಿಯಾ ತಂಡಗಳಿವೆ. 2020ರಲ್ಲಿ ಸ್ಪೇನ್ ತಂಡವು ಯುರೊ ಸೆಮಿಫೈನಲ್ ತಲುಪುವಲ್ಲಿ ಪೆದ್ರಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ನಂತರ ಮಂಡಿಯ ಸ್ನಾಯುರಜ್ಜು ನೋವು ಅವರನ್ನು ಆಗಾಗ ಕಾಡಿತ್ತು. ಕಳೆದ ಕೆಲವು ಸಮಯದಿಂದ ಅವರು ಉತ್ತಮ ಲಯದಲ್ಲಿದ್ದಾರೆ.

ADVERTISEMENT

ಮಾಡ್ರಿಕ್‌ ಜೊತೆ ಮಾಟಿಯೊ ಕೊವಾಸಿಕ್ ಮತ್ತು ಮಾರ್ಸೆಲೊ ಬ್ರಾಝೊವಿಕ್ ಅವರು ಕ್ರೊವೇಷ್ಯಾದ ಮಿಡ್‌ಫೀಲ್ಡ್ ಶಕ್ತಿಯಾಗಿದ್ದಾರೆ. 2018ರಲ್ಲಿ ವಿಶ್ವಕಪ್ ಫೈನಲ್ ತಲುಪಿದ್ದ ಕ್ರೊವೇಷಿಯಾ 2022ರಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತ್ತು. ಯುರೊ 2020ರ ಕೂಟದ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್‌ ಹೆಚ್ಚುವರಿ ಅವಧಿಯ ಆಟದಲ್ಲಿ ಕ್ರೊವೇಷ್ಯಾ ಮೇಲೆ ಜಯಗಳಿಸಿತ್ತು.

ಕೊಲೋನ್‌ನಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಹಂಗೆರಿ ಮತ್ತು ಸ್ವಿಜರ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.