ಬೆಂಗಳೂರು: ಇಂಜುರಿ ಅವಧಿಯಲ್ಲಿ ಗೋಲು ಬಿಟ್ಟುಕೊಟ್ಟ ಪರಿಣಾಮ ಕರ್ನಾಟಕ ತಂಡವು ಸಂತೋಷ್ ಟ್ರೋಫಿಗಾಗಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ 1–2 ಗೋಲುಗಳಿಂದ ತಮಿಳುನಾಡು ತಂಡಕ್ಕೆ ಮಣಿಯಿತು.
ಅನಂತಪುರದ ಆರ್‌ಡಿಟಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಲಿಜೊ ಕೆ. 30ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಮಿಳುನಾಡು ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. 80ನೇ ನಿಮಿಷದಲ್ಲಿ ಕರ್ನಾಟಕದ ನಿಖಿಲ್‌ರಾಜ್ ಮುರುಗೇಶ್ ಕುಮಾರ್ ಚೆಂಡನ್ನು ಗುರಿ ಸೇರಿಸಿ ತಂಡಗಳ ಸ್ಕೋರ್ ಸಮಬಲಗೊಳಿಸಿದರು.
ಅಂತಿಮ 10 ನಿಮಿಷಗಳಲ್ಲಿ ಉಭಯ ತಂಡಗಳ ಆಟಗಾರರಿಂದ ತುರುಸಿನ ಪೈಪೋಟಿ ನಡೆಯಿತು. ಆದರೆ, ಇಂಜುರಿ (90+1ನೇ) ಅವಧಿಯ ಮೊದಲ ನಿಮಿಷದಲ್ಲಿ ಎಸ್.ಶರೋನ್ ಅವರು ತಮಿಳುನಾಡು ಪರ ಗೆಲುವಿನ ಗೋಲು ದಾಖಲಿಸಿದರು.
ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ತಮಿಳುನಾಡು ತಂಡವು 6 ಅಂಕಗಳೊಂದಿಗೆ ಜಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಹಾಗೂ ಅಂಡಮಾನ್ ನಿಕೋಬರ್ ತಲಾ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಐದು ಬಾರಿಯ ಚಾಂಪಿಯನ್ ಗೋಲು ವ್ಯತ್ಯಾಸದಲ್ಲಿ ಅಂಡಮಾನ್ ತಂಡಕ್ಕಿಂತ ಮುಂದಿದೆ. ಎರಡೂ ಪಂದ್ಯ ಸೋತಿರುವ ಆಂಧ್ರಪ್ರದೇಶ ಕೊನೆಯ ಸ್ಥಾನದಲ್ಲಿದೆ.
ಮತ್ತೊಂದು ಪಂದ್ಯದಲ್ಲಿ ಅಂಡಮಾನ್ ತಂಡವು 1–0ಯಿಂದ ಆಂಧ್ರಪ್ರದೇಶ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.