ADVERTISEMENT

ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ಗೆ ಚೊಚ್ಚಲ ಪ್ರಶಸ್ತಿ

ಪಿಟಿಐ
Published 20 ಮಾರ್ಚ್ 2022, 19:50 IST
Last Updated 20 ಮಾರ್ಚ್ 2022, 19:50 IST
ಹೈದರಾಬಾದ್ ತಂಡದ ಆಟಗಾರರ ಸಂಭ್ರಮ –ಪಿಟಿಐ ಸಂಗ್ರಹ ಚಿತ್ರ
ಹೈದರಾಬಾದ್ ತಂಡದ ಆಟಗಾರರ ಸಂಭ್ರಮ –ಪಿಟಿಐ ಸಂಗ್ರಹ ಚಿತ್ರ   

ಫತೋರ್ಡ, ಗೊವಾ: ಟೂರ್ನಿ ಯುದ್ದಕ್ಕೂ ಉತ್ತಮ ಆಟವಾಡುತ್ತ ಬಂದಿದ್ದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಕೇರಳ ಬ್ಲಾಸ್ಟರ್ಸ್‌ ಎದುರಿನ ಫೈನಲ್‌ನಲ್ಲಿ ತಂಡ ‍ಪೆನಾಲ್ಟಿಯಲ್ಲಿ 3–1ರಲ್ಲಿ ಗೆಲುವು ದಾಖಲಿಸಿತು.

ಈ ಮೂಲಕ ಮೊದಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು. ಕೇರಳ ಬ್ಲಾಸ್ಟರ್ಸ್ ಮೂರನೇ ಬಾರಿ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿತು.

ADVERTISEMENT

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. ಹೀಗಾಗಿ ಹೆಚ್ಚುವರಿ ಅವಧಿಯ ನೀಡಲಾಗಿತ್ತು. ಈ ಸಂದರ್ಭದಲ್ಲಿ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಮೊರೆ ಹೋಗಲಾಯಿತು.

ಹೈದರಾಬಾದ್‌ ಪರ ಜಾವೊ ವಿಕ್ಟರ್, ಖಾಸ ಕಮಾರ ಮತ್ತು ಹಲಿಚರಣ್ ನಜರೆ ಚೆಂಡನ್ನು ಗುರಿ ಮುಟ್ಟಿಸಿದರು.

ಕೇರಳ ತಂಡದ ಆಯುಷ್ ಅಧಿಕಾರಿ ಮಾತ್ರ ಯಶಸ್ಸು ಕಂಡರು. ಹೈದರಾಬಾದ್‌ ಎಫ್‌ಸಿಯ ಗೋಲ್‌ ಕೀಪರ್ ಲಕ್ಷ್ಮಿಕಾಂತ್ ಕಟ್ಟಿಮನಿ ಮೂರು ‘ಸೇವ್‌’ಗಳ ಮೂಲಕ ಮಿಂಚಿದರು.

ನಿಗದಿತ ಅವಧಿಯ 68ನೇ ನಿಮಿಷದಲ್ಲಿ ರಾಹುಲ್ ಕೆ.ಪಿ ಗಳಿಸಿದ ಗೋಲಿನ ಮೂಲಕ ಕೇರಳ ಕೇರಳ ಮುನ್ನಡೆ ಸಾಧಿಸಿತು. 88ನೇ ನಿಮಿಷದಲ್ಲಿ ಸಾಹಿರ್ ತವೋರ ಅವರ ಗೋಲಿನ ಮೂಲಕ ಹೈದರಾಬಾದ್ ತಿರುಗೇಟು ನೀಡಿತು.

ಗ್ಯಾಲರಿಗಳಲ್ಲಿ ಅಲೆ ಎಬ್ಬಿಸಿದ ಪ್ರೇಕ್ಷಕರು: ಎರಡು ಆವೃತ್ತಿಗಳಲ್ಲಿ ಇದೇ ಮೊದಲ ಬಾರಿ ಐಎಸ್‌ಎಲ್ ಟೂರ್ನಿಯಲ್ಲಿ ಗ್ಯಾಲರಿಯ ಸ್ಟ್ಯಾಂಡ್‌ಗಳು ಪ್ರೇಕ್ಷರಿಂದ ತುಂಬಿದ್ದವು.

ಕೋವಿಡ್‌–19ರಿಂದಾಗಿ ಎರಡು ಆವೃತ್ತಿಗಳ ಪಂದ್ಯಗಳನ್ನು ಬಯೊಬಬಲ್‌ನಲ್ಲಿ ಆಯೋಜಿಸ ಲಾಗಿತ್ತು. ಕಳೆದ ಆವೃತ್ತಿಯ ಫೈನಲ್ ಪಂದ್ಯವನ್ನು ಕೂಡ ಬಯೊಬಬಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಫೈನಲ್‌ಗೆ ಪ್ರೇಕ್ಷಕರನ್ನು ಅವಕಾಶ ನೀಡಲು ನಿರ್ಧರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.