ಮಡಗಾಂವ್: ಮಾಜಿ ಚಾಂಪಿಯನ್ನರಾದ ಬೆಂಗಳೂರು ಎಫ್‌ಸಿ ಮತ್ತು ಗೋವಾ ಎಫ್‌ಸಿ ತಂಡಗಳೂ ಶನಿವಾರ ಇಲ್ಲಿ ಇಂಡಿಯುನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳಲ್ಲಿ ಪ್ರತಿಭಾನ್ವಿತ ಆಟಗಾರರಿದ್ದು ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ.
ಆದರೆ ಗೋವಾ ತಂಡಕ್ಕೆಹೋಲಿಸಿದರೆ, ಹಾಲಿ ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿ ಉತ್ತಮ ಲಯದಲ್ಲಿದೆ. ಗೋವಾ ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯಗಳಿಸಲು ವಿಫಲವಾಗಿದೆ.
ಈ ಬಾರಿ ಬಿಎಫ್‌ಸಿ ಲೀಗ್‌ನಲ್ಲಿ ಅಮೋಘ ಆರಂಭ ಮಾಡಿದ್ದು 6 ಪಂದ್ಯಗಳಿಂದ 16 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದೆ. ಇವುಗಳಲ್ಲಿ ಐದು ಗೆಲುವು, ಒಂದು ಡ್ರಾ ಸೇರಿವೆ. ಇದುವರೆಗೆ ಎದುರಾಳಿಗೆ ಬಿಟ್ಟುಕೊಟ್ಟಿರುವುದು ಒಂದೇ ಗೋಲು ಎಂಬುದೂ ಗಮನಾರ್ಹ. ಇನ್ನೊಂದೆಡೆ ಗೋವಾ ತಂಡ ಆರು ಪಂದ್ಯಗಳಿಂದ (1 ಜಯ, 3 ಡ್ರಾ, 2 ಸೋಲು) ಆರು ಪಾಯಿಂಟ್ಸ್ ಗಳಿಸಿ ಹತ್ತನೇ ಸ್ಥಾನದಲ್ಲಿದೆ.
ಉತ್ತಮ ಪಾಸ್ ಪರ್ಸಂಟೇಜ್, ಎದುರಾಳಿಗಳ ರಕ್ಷಣಾ ಕೋಟೆಯ ಮೇಲೆ ಒತ್ತಡ ಹೇರಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದರಲ್ಲಿ ತಂಡ ಯಶ ಕಂಡಿದೆ. ಮುನ್ಪಡೆ ಕೂಡ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಎರಡು ತಂಡಗಳು ಐಎಸ್‌ಎಲ್‌ನಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಬಿಎಫ್‌ಸಿ ಏಳು ಬಾರಿ ಜಯಗಳಿಸಿದರೆ, ನಾಲ್ಕು ಬಾರಿ ಗೋವಾ ತಂಡ ವಿಜಯಿಯಾಗಿದೆ. ನಾಲ್ಕು ಪಂದ್ಯಗಳು ಡ್ರಾ ಆಗಿವೆ.
ಆದರೆ ಗೋವಾಕ್ಕೆ ಇರುವ ಸಮಾಧಾನವೆಂದರೆ ಕೋಚ್ ಮನೊಲೊ ಮಾರ್ಕ್ವೆಝ್ ಅವರು ಬಿಎಫ್‌ಸಿ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಎಂಟು ಪಂದ್ಯಗಳಲ್ಲಿ ಅವರು ಒಂದೂ ಸೋತಿಲ್ಲ.
‘ಈ ಸಲ ನಾವು ಕೆಟ್ಟದಾಗಿ ಆಡಿದ್ದು ಮೋಹನ್ ಬಾಗನ್ ವಿರುದ್ಧ ಮಾತ್ರ. ಮುಂಬೈ ವಿರುದ್ಧ ನಮ್ಮ ಪಂದ್ಯ ಹೋರಾಟದಿಂದ ಕೂಡಿತ್ತು. ಉಳಿದ ಪಂದ್ಯಗಳು ಸಮಬಲವಾಗಿದ್ದವು. ನಮ್ಮ ದಾಳಿ ಈಗ ಉತ್ತಮವಾಗಿದೆ’ ಎಂದು ಮಾರ್ಕ್ವೆಝ್ ಹೇಳಿದರು.
ಬಿಎಫ್‌ಸಿ ಹೆಡ್ ಕೋಚ್ ಜೆರಾಲ್ಡ್ ಝಾರ್ಗೊಜಾ ಅವರು ತಮ್ಮ ರಕ್ಷಣಾ ತಂತ್ರದ ಯೋಜನೆಯು ಯಶಸ್ಸಿಗೆ ಕಾರಣವೆನ್ನುತ್ತಾರೆ. ಇದರಿಂದ ಎದುರಾಳಿಗೆ ಗೋಲು ಗಳಿಸಲು ಅವಕಾಶವಾಗಿಲ್ಲ ಎನ್ನುವುದು ಅವರ ಅಭಿಮತ.
‘ನಮ್ಮ ಗೋಲಿನ ಬಾಕ್ಸ್‌ನತ್ತ ಚೆಂಡು ಬರುವುದನ್ನು ತಡೆಯಲು ಶ್ರಮ ಹಾಕುತ್ತಿದ್ದೇವೆ. ನಮ್ಮ ಗೋಲು ರಕ್ಷಿಸುವುದು, ಗುರುಪ್ರೀತ್ (ಗೋಲ್ ಕೀಪರ್) ಅವರನ್ನು ರಕ್ಷಿಸುವುದು ತಂತ್ರ’ ಎನ್ನುತ್ತಾರೆ.
ಗುರುಪ್ರೀತ್ ಸಂಧು ಅವರು 50 ಪಂದ್ಯಗಳಲ್ಲಿ (ಈ ಋತುವಿನಲ್ಲಿ ಐದು ಪಂದ್ಯ ಸೇರಿ) ಗೋಲುಗಳನ್ನು ಬಿಟ್ಟುಕೊಡದ ಐಎಸ್‌ಎಲ್‌ನ ಮೊದಲ ಗೋಲ್‌ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುವ ಹಾದಿಯಲ್ಲಿದ್ದಾರೆ. ಈವರೆಗೆ 49 ಐಎಸ್‌ಎಲ್ ಪಂದ್ಯಗಳಲ್ಲಿ ಎದುರಾಳಿಗೆ ಗೋಲುಬಿಟ್ಟುಕೊಟ್ಟಿಲ್ಲ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.