ಪುಣೆ: ಸುನಿಲ್ ಚೆಟ್ರಿ–ಮಿಕು ಜೋಡಿ ಮತ್ತೊಮ್ಮೆ ಫುಟ್‌ಬಾಲ್ ಪ್ರಿಯರ ಹೃದಯ ಗೆದ್ದರು. ಅವರಿಬ್ಬರು ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಸೋಮವಾರ ಪುಣೆ ಎಫ್‌ಸಿ ವಿರುದ್ಧ ಭರ್ಜರಿ ಜಯ ಗಳಿಸಿತು.
ಕಳೆದ ಆವೃತ್ತಿಯಲ್ಲಿ ತವರಿನ ಹೊರಗೆ ಬಿಎಫ್‌ಸಿ ಅಮೋಘ ಸಾಮರ್ಥ್ಯ ತೋರಿತ್ತು. ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳನ್ನು ಗೆದ್ದಿತ್ತು. ಸೋಮವಾರದ ಜಯದ ಮೂಲಕ ಈ ಬಾರಿಯೂ ಅದೇ ಹಾದಿಯಲ್ಲಿ ಮುನ್ನಡೆಯುವ ಭರವಸೆ ಮೂಡಿಸಿತು.
ಆರಂಭದ ಕೆಲವು ನಿಮಿಷ ಎರಡೂ ತಂಡಗಳು ಆಕ್ರಮಣಕ್ಕೆ ಮುಂದಾಗದೆ ನಿಧಾನಗತಿಯ ಆಟಕ್ಕೆ ಮೊರೆ ಹೋದವು. ಏಳನೇ ನಿಮಿಷದಲ್ಲಿ ಆತಿಥೇಯ ತಂಡದ ಎಮಿಲಿಯಾನೊ ಅಲ್ಫಾರೊ ಚೆಂಡಿನೊಂದಿಗೆ ಮುನ್ನುಗ್ಗಿ ಗೋಲು ಗಳಿಸಲು ಶ್ರಮಿಸುವುದರೊಂದಿಗೆ ಆಟ ಕಳೆಗಟ್ಟಿತು. ಅಪಾಯ ಅರಿತ ಬಿಎಫ್‌ಸಿ ಮರುಕ್ಷಣದಲ್ಲೇ ಆಕ್ರಮಣ ಆರಂಭಿಸಿತು. 10ನೇ ನಿಮಿಷದಲ್ಲಿ ಮಿಕು ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸಿದರು. ಆದರೆ ಚೆಂಡನ್ನು ಗುರಿ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.
16ನೇ ನಿಮಿಷದಲ್ಲಿ ಉದಾಂತ ಸಿಂಗ್ ಅವರಿಗೂ ಉತ್ತಮ ಅವಕಾಶ ಲಭಿಸಿತು. ಅವರಿಗೂ ಗೋಲು ಗಳಿಸಲು ಆಗಲಿಲ್ಲ. ಈ ವೈಫಲ್ಯಗಳ ನಂತರ ಬಿಎಫ್‌ಸಿಯ ಆಕ್ರಮಣ ಮತ್ತಷ್ಟು ಬಲ ಪಡೆದುಕೊಂಡಿತು. 41ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಎದುರಾಳಿ ತಂಡದ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿ ತಂಡದ ಖಾತೆ ತೆರೆದರು. ಪುಣೆ ತಂಡದ ಆವರಣದಲ್ಲಿ ಡಿಮಾಸ್ ಡೆಲ್ಗಾಡೊ ನೀಡಿದ ಪಾಸ್‌ಗೆ ಎದೆಯೊಡ್ಡಿ ಚೆಂಡನ್ನು ನಿಯಂತ್ರಿಸಿದ ಚೆಟ್ರಿ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಮುಂದೆ ಸಾಗಿದರು. ಗೋಲ್‌ಕೀಪರ್ ಸಮೀಪದಲ್ಲೇ ಚೆಂಡನ್ನು ಗುರಿಯತ್ತ ತಳ್ಳಿ ಸಂಭ್ರಮಿಸಿದರು.
ಎರಡೇ ನಿಮಿಷಗಳಲ್ಲಿ ಮಿಕು ಚಾಣಾಕ್ಷತನ ಮೆರೆದರು. ಪುಣೆ ತಂಡದ ರಕ್ಷಣಾ ವಿಭಾಗದವರಿಂದ ಚೆಂಡನ್ನು ಕಸಿದುಕೊಂಡ ಅವರು ಎಡಭಾಗದಲ್ಲಿ ಹೊಂಚು ಹಾಕಿ ನಿಂತಿದ್ದ ಸುನಿಲ್ ಚೆಟ್ರಿ ಕಡೆಗೆ ತಳ್ಳಿದರು. ಚುರುಕಿನ ಪಾದಚಲನೆಯೊಂದಿಗೆ ಮುನ್ನುಗ್ಗಿದ ಚೆಟ್ರಿ ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.
ಎರಡು ಗೋಲುಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಮುನ್ನಡೆ ಹೆಚ್ಚಿಸುವ ಗುರಿಯೊಂದಿಗೆ ಮತ್ತಷ್ಟು ಆಕ್ರಮಣ ನಡೆಸಿತು. ಇದಕ್ಕೆ 64ನೇ ನಿಮಿಷದಲ್ಲಿ ಫಲ ಸಿಕ್ಕಿತು. ಮೋಹಕ ಗೋಲು ಗಳಿಸಿದ ಮಿಕು ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಕೊನೆಯ 15 ನಿಮಿಷಗಳಲ್ಲಿ ತಿರುಗೇಟು ನೀಡಲು ಪುಣೆ ಎಫ್‌ಸಿ ಶ್ರಮಿಸಿದರೂ ಗುರುಪ್ರೀತ್ ಸಿಂಗ್ ಸಂಧು ಅವರ ಚುರುಕಿನ ಗೋಲ್‌ಕೀಪಿಂಗ್ ಮುಂದೆ ಆ ತಂಡದ ಆಟಗಾರರು ಮಂಕಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.