ಕೊಚ್ಚಿ: ಎಡ್ಗರ್ ಮೆನ್ಡೆಜ್ ಗಳಿಸಿದ ಎರಡು ಗೋಲುಗಳ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಶುಕ್ರವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ 3–1ರಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದಿತು.
ಇದರೊಂದಿಗೆ ಟೂರ್ನಿಯಲ್ಲಿ ಬಿಎಫ್‌ಸಿ ತಂಡವು ಅಜೇಯ ಓಟ ಮುಂದುವರಿಸಿದೆ. ಒಟ್ಟು 6 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡವು 5ರಲ್ಲಿ ಜಯಿಸಿದೆ. 1 ಪಂದ್ಯ ಡ್ರಾ ಆಗಿದೆ. ಒಟ್ಟು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜೆಮ್ಶೆಡ್‌ಪುರ ಎಫ್‌ಸಿ ತಂಡವು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿಯ ಜಾರ್ಜ್ ಪೆರಿಯರ್ ದಿಯಾಜ್ (8ನೇ ನಿ) ಮೊದಲ ಗೋಲು ಗಳಿಸಿದರು. ಪಂದ್ಯದ ಅರ್ಧಭಾಗದಲ್ಲಿ ಬಿಎಫ್‌ಸಿ 1–0 ಮುನ್ನಡೆ ಕಾಪಾಡಿಕೊಂಡಿತ್ತು.
ಆದರೆ ಕೇರಳ ತಂಡದ ಜೆಸಿಯಸ್ ಜಿಮೆಂಜ್ (45+2ನಿ) ಅವರು ಪೆನಾಲ್ಟಿಯಲ್ಲಿ ಗೋಲು ಗಳಿಸಿ ತಂಡ ಸಮಬಲ ಸಾಧಿಸಲು ಕಾರಣರಾದರು. ನಂತರ ಉಭಯ ತಂಡಗಳು ಮುನ್ನಡೆ ಸಾಧಿಸಲು ಜಿದ್ದಾಜಿದ್ದಿನ ಹೋರಾಟ ನಡೆಸಿದವು.
ಬೆಂಗಳೂರು ತಂಡದ ಎಡ್ಗರ್ 74ನೇ ನಿಮಿಷ ಮತ್ತು 90+4ನೇ ನಿಮಿಷದಲ್ಲಿ ಎರಡು ಗೋಲು ಗಳಿಸುವಲ್ಲಿ ಸಫಲರಾದರು. ಇದರಿಂದ ತಂಡವು ಗೆಲುವಿನತ್ತ ಹೆಜ್ಜೆ ಹಾಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.