ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿ ಫೈನಲ್‌ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 19:45 IST
Last Updated 8 ಮಾರ್ಚ್ 2020, 19:45 IST
   

ಕೋಲ್ಕತ್ತ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಕನಸು ಭಾನುವಾರ ಭಗ್ನಗೊಂಡಿತು.

ಇಲ್ಲಿನ ಸಾಲ್ಟ್‌ಲೇಕ್‌ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್‌ನ ಹೋರಾಟದಲ್ಲಿ ಸುನಿಲ್‌ ಚೆಟ್ರಿ ಪಡೆ 1–3 ಗೋಲುಗಳಿಂದ ಆತಿಥೇಯ ಎಟಿಕೆ ಎಫ್‌ಸಿ ಎದುರು ಸೋತಿತು.

ಮೊದಲ ಲೆಗ್‌ನ ಹಣಾಹಣಿಯಲ್ಲಿ 1–0 ಗೋಲಿನಿಂದ ಗೆದ್ದಿದ್ದ ಬೆಂಗಳೂರಿನ ತಂಡ ಈ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದರೂ ಪ್ರಶಸ್ತಿ ಸುತ್ತು ಪ್ರವೇಶಿಸುತ್ತಿತ್ತು. ಇದಕ್ಕೆ ಎಟಿಕೆ ಎಫ್‌ಸಿ ಅವಕಾಶ ನೀಡಲಿಲ್ಲ. ತವರಿನಲ್ಲಿ ಪ್ರಾಬಲ್ಯ ಮೆರೆದ ಈ ತಂಡ, ಗೋಲು ಗಳಿಕೆಯ ಸರಾಸರಿಯ ಆಧಾರದಲ್ಲಿ (3–2) ಫೈನಲ್‌ಗೆ ಲಗ್ಗೆ ಇಟ್ಟಿತು.

ADVERTISEMENT

ಎಟಿಕೆ ಎದುರು 5–1 ಗೆಲುವಿನ ದಾಖಲೆ ಹೊಂದಿದ್ದ ಬಿಎಫ್‌ಸಿ ಆರಂಭಲ್ಲೇ ಖಾತೆ ತೆರೆಯಿತು. ಐದನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಆಶಿಕ್‌ ಕುರುಣಿಯನ್‌ ಪ್ರವಾಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದ್ದರು.

ಆದರೆ ನಂತರ ಎಟಿಕೆ ಆಟಗಾರರು ಮೋಡಿ ಮಾಡಿದರು. 30ನೇ ನಿಮಿಷದಲ್ಲಿ ಆತಿಥೇಯ ತಂಡದ ನಾಯಕ ರಾಯ್‌ ಕೃಷ್ಣ ಗೋಲು ಹೊಡೆದು 1–1 ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲೂ ಎಟಿಕೆ ಆಕ್ರಮಣಕಾರಿಯಾಗಿ ಆಡಿತು. 62ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಡೇವಿಡ್‌ ವಿಲಿಯಮ್ಸ್‌, ಆತಿಥೇಯರಿಗೆ 2–1 ಮುನ್ನಡೆ ತಂದುಕೊಟ್ಟರು. 79ನೇ ನಿಮಿಷದಲ್ಲೂ ಅವರು ಕಾಲ್ಚಳಕ ತೋರಿದರು.

ಬಿಎಫ್‌ಸಿ ನಾಯಕ ಚೆಟ್ರಿ ಆಟ ನಡೆಯಲಿಲ್ಲ. ಅವರನ್ನು ಕಟ್ಟಿಹಾಕುವಲ್ಲಿ ಆತಿಥೇಯ ತಂಡದ ರಕ್ಷಣಾ ವಿಭಾಗದ ಆಟಗಾರರು ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.