ಬೆಂಗಳೂರು: ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ‘ಹ್ಯಾಟ್ರಿಕ್’ ಜಯಸಾಧಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡವು 3–0ಯಿಂದ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ ವಿರುದ್ಧ ಅಧಿಕಾರಯುತ ಜಯ ಸಾಧಿಸಿತು.
ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಎದುರು ಅಮೋಘ ಆಟವಾಡಿದ ಆತಿಥೇಯ ತಂಡದ ಆಟಗಾರರು ಮಿಂಚಿದರು. ಪಂದ್ಯದ 9ನೇ ನಿಮಿಷದಲ್ಲಿ ಎಡ್ಗರ್ ಮೆಂಡೆಜ್, 20ನೇ ನಿಮಿಷದಲ್ಲಿ ಸುರೇಶ್ ಸಿಂಗ್ ವಾಂಗ್ಲೆಮ್ ಮತ್ತು 51ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಸುನಿಲ್ ಚೆಟ್ರಿ ಗೋಲು ಹೊಡೆದರು.
ಮೋಹನ್ ಬಾಗನ್ ತಂಡಕ್ಕೆ ಒಂದೂ ಗೋಲು ಗಳಿಸಲು ಸಾಧ್ಯವಾಗ ಲಿಲ್ಲ. ಇದರ ಶ್ರೇಯ ಬಿಎಫ್‌ಸಿಯ ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಗುರುಭಕ್ಷ್ ಸಿಂಗ್ ಅವರಿಗೆ ಸಲ್ಲಬೇಕು.
ಒತ್ತಡದಲ್ಲಿ ಆಡಿದ ಬಾಗನ್ ತಂಡದ ಗ್ರೇಗ್ ಸ್ಟೀವರ್ಟ್ ಮತ್ತು ಲಲೆಂಗ್‌ಮಾವಿಯಾ ರಾಲ್ಟೆ ಅವರು ಹಳದಿ ಕಾರ್ಡ್ ದರ್ಶನ ಮಾಡಿದರು. ಬಿಎಫ್‌ಸಿಯ ರೋಹಿತ್ ಧಾನು ಹಾಗೂ ನಿಖಿಲ್ ಪೂಜಾರಿ ಅವರಿಗೂ ರೆಫರಿ ಹಳದಿ ಕಾರ್ಡ್ ತೋರಿಸಿದರು.
ಟೂರ್ನಿಯಲ್ಲಿ ಬಿಎಫ್‌ಸಿ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಈ ಪಂದ್ಯದಲ್ಲಿ ಬಲಿಷ್ಠ ಬಾಗನ್ ತಂಡವನ್ನು ಸೋಲಿಸಿರುವುದರಿಂದ ಚೆಟ್ರಿ ಬಳಗದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಅಂಕಪಟ್ಟಿಯಲ್ಲಿ ಒಟ್ಟು 9 ಅಂಕಗಳೊಂದಿಗೆ ಬಿಎಫ್‌ಸಿ ಅಗ್ರಸ್ಥಾನದಲ್ಲಿದ್ದಾರೆ.
ಪಂಜಾಬ್ ಎಫ್‌ಸಿ ತಂಡವೂ ಆಡಿರುವ ಎಲ್ಲ ಮೂರು ಪಂದ್ಯಗಳನ್ನು ಗೆದ್ದಿದೆ. ಆದರೆ ಗೋಲು ಗಳಿಕೆಯಲ್ಲಿ ಬಿಎಫ್‌ಸಿ ಮುಂಚೂಣಿಯಲ್ಲಿದ್ದು, ಮೊದಲ ಸ್ಥಾನದಲ್ಲಿದೆ.
ಟಾಪ್ ಸ್ಕೋರರ್ ಚೆಟ್ರಿ
ಸುನಿಲ್ ಚೆಟ್ರಿ ಅವರು ಐಎಸ್‌ಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು.
ಮೋಹನ್ ಬಾಗನ್ ಎದುರಿನ ಪಂದ್ಯದಲ್ಲಿ ದೊರೆತ ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಅವರು ಈ ದಾಖಲೆ ಬರೆದರು. ಅವರು ಒಟ್ಟು 64 ಗೋಲು ಗಳಿಸಿದ್ದಾರೆ. ಇದರೊಂದಿಗೆ ಬಾರ್ತಲೊಮೆಯೆ ಒಜಿಬೆಕ್ (63) ಅವರ ದಾಖಲೆಯನ್ನು ಮೀರಿ ನಿಂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.