ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ‘ಲೀಗ್ ವಿಜೇತ‘ ತಂಡಕ್ಕೆ ಬಹುಮಾನ ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಚಾಂಪಿಯನ್ ತಂಡಕ್ಕೆ ನೀಡಲಾಗುವ ಮೊತ್ತದಲ್ಲಿ ಕಡಿತ ಮಾಡಲಾಗಿದೆ. ಟೂರ್ನಿಯ ಆಯೋಜಕರು ಶುಕ್ರವಾರ ಈ ವಿಷಯ ಪ್ರಕಟಿಸಿದ್ದಾರೆ.
2019–20ನೇ ಆವೃತ್ತಿಯಲ್ಲಿ ‘ಲೀಗ್ ವಿಜೇತ‘ ಪದ್ಧತಿಯನ್ನು ಪರಿಚಯಿಸಲಾಗಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡಕ್ಕೆ ಈ ಗೌರವ ನೀಡಲಾಗುತ್ತಿದೆ. ಈ ಹಿಂದಿನ ಎರಡು ಆವೃತ್ತಿಗಳಿಂದ ಈ ತಂಡಕ್ಕೆ ₹ 50 ಲಕ್ಷ ನೀಡಲಾಗುತ್ತಿತ್ತು. ಈ ಬಾರಿ ಆ ಮೊತ್ತವನ್ನು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ₹ 3.50 ಕೋಟಿಗೆ ಹೆಚ್ಚಿಸಿದೆ.
ಈ ಹಿಂದೆ ಚಾಂಪಿಯನ್ ಪಟ್ಟ ಧರಿಸುವ ತಂಡಕ್ಕೆ ₹ 8 ಕೋಟಿ ನೀಡಲಾಗುತ್ತಿತ್ತು. ಅದನ್ನು ಈಗ ₹ 6 ಕೋಟಿಗೆ ಇಳಿಸಲಾಗಿದೆ. ರನ್ನರ್ ಅಪ್ ತಂಡಕ್ಕೆ ₹ 3 ಕೋಟಿ (ಈ ಹಿಂದೆ ₹ 4 ಕೋಟಿ) ಮತ್ತು ಸೆಮಿಫೈನಲ್ ತಲುಪಿದ ಇನ್ನೆರಡು ತಂಡಗಳು ತಲಾ ₹ 1.5 ಕೋಟಿ ಪಡೆಯಲಿವೆ.
2021-22ರ ಆವೃತ್ತಿಯಲ್ಲಿ ನೀಡಲಾಗುವ ಒಟ್ಟು ಬಹುಮಾನ ಮೊತ್ತ ₹ 15.5 ಕೋಟಿ ಆಗಿದೆ.
ಒಂದು ವೇಳೆ ಲೀಗ್ ವಿಜೇತ ತಂಡವು ಚಾಂಪಿಯನ್ ಆದರೆ ₹ 9.5 ಕೋಟಿ (₹ 3.5 ಕೋಟಿ+ ₹ 6 ಕೋಟಿ) ಜೇಬಿಗಿಳಿಸಲಿದೆ. ರನ್ನರ್ ಅಪ್ ಸ್ಥಾನ ಗಳಿಸಿದರೆ ₹ 6.5 ಕೋಟಿ ತನ್ನದಾಗಿಸಿಕೊಳ್ಳಲಿದೆ.
ಈ ಬಾರಿಯ ಐಎಸ್‌ಎಲ್ ಟೂರ್ನಿ ನವಂಬರ್ 19ರಂದು ಗೋವಾದಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.