ಬೆಂಗಳೂರು: ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಜಾವಿ ಹರ್ನಾಂಡೇಜ್ ಕಾಲ್ಚಳಕದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜೆಮ್ಶೆಡ್‌ಪುರ್ ಫುಟ್‌ಬಾಲ್ ಕ್ಲಬ್ ಎದುರು ಜಯಿಸಿತು.
ಕಂಠೀರವ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜಾವಿ 44ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಬಿಎಫ್‌ಸಿ ತಂಡವು 1–0ಯಿಂದ ಗೆದ್ದಿತು.
ಬಿಎಫ್‌ಸಿಯು 4–3–1–2ರ ಲೈನ್ ಅಪ್‌ನೊಂದಿಗೆ ಕಣಕ್ಕಿಳಿಯಿತು. ಶಿವಶಕ್ತಿ ನಾರಾಯಣನ್ ಮತ್ತು ಸುನೀಲ್ ಚೆಟ್ರಿ ಅವರು ಮುಂಚೂಣಿಯಲ್ಲಿದ್ದರು. ಮಿಡ್‌ಫೀಲ್ಡರ್ ಜಾವಿ ಆರಂಭದಿಂದಲೂ ಚುರುಕಾಗಿ ಆಡಿದರು.
ಬಿಎಫ್‌ಸಿಯ ರಕ್ಷಣಾಪಡೆಯು ಮುಖ್ಯ ಕೋಚ್ ಜೆರಾರ್ಡ್ ಝರ್‌ಗೋಜಾ ಅವರ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿತು.
ಸೆಂಟರ್ ಬ್ಯಾಕ್‌ನಲ್ಲಿದ್ದ ಅಲೆಕ್ಸಾಂಡರ್ ಜೊವಾನೊವಿಚ್ ಮತ್ತು ಸ್ಲಾವಕೊ ದಾಮಜನೋವಿಚ್ ಲಾಂಗ್ ಪಾಸ್‌ಗಳ ಮೂಲಕ ಎದುರಾಳಿಗಳ ಅವಕಾಶಗಳನ್ನು ತಪ್ಪಿಸಿದರು. ನಾರಾಯಣನ್ ಮತ್ತು ಚೆಟ್ರಿ ಚುರುಕಾದ ಮತ್ತು ಚುಟುಕಾದ ಪಾಸ್‌ಗಳ ಮೂಲಕ ಒತ್ತಡ ಹೇರಿದರು.
ಜೆಎಫ್‌ಸಿ ತಂಡವು ಬಹುತೇಕ ಎಲ್ಲ ಹಂತಗಳಲ್ಲಿಯೂ ಬಿಎಫ್‌ಸಿಯ ವೇಗಕ್ಕೆ ಸರಿಸಾಟಿಯಾಗಿ ಆಡುವಲ್ಲಿ
ಎಡವಿತು.
ಬಿಎಫ್‌ಸಿ ತಂಡಕ್ಕೆ ಇದು ಈ ಋತುವಿನಲ್ಲಿ ಎರಡನೇ ಜಯವಾಗಿದೆ. ಇದುವರೆಗೆ ಒಟ್ಟು 11 ಪಂದ್ಯ ಆಡಿರುವ ತಂಡವು ಐದರಲ್ಲಿ ಸೋತು, ನಾಲ್ಕರಲ್ಲಿ ಡ್ರಾ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.