ADVERTISEMENT

ಇಂಡಿಯನ್ ಸೂಪರ್ ಲೀಗ್‌: ಅಗ್ರಸ್ಥಾನಕ್ಕಾಗಿ ಜೆಎಫ್‌ಸಿ– ಹೈದರಾಬಾದ್‌ ಪೈಪೋಟಿ

ಬಾರ್ತೊಲೊಮೆ, ಡ್ಯಾನಿಯಲ್ ಚೀಮಾ ಮೇಲೆ ಎಲ್ಲರ ಕಣ್ಣು

ಪಿಟಿಐ
Published 16 ಜನವರಿ 2022, 13:29 IST
Last Updated 16 ಜನವರಿ 2022, 13:29 IST
ಗ್ರೆಗ್ ಸ್ಟೀವರ್ಟ್‌ –ಐಎಸ್‌ಎಲ್‌ ಚಿತ್ರ
ಗ್ರೆಗ್ ಸ್ಟೀವರ್ಟ್‌ –ಐಎಸ್‌ಎಲ್‌ ಚಿತ್ರ   

ಬ್ಯಾಂಬೊಲಿಮ್, ಗೋವಾ: ಆಕ್ರಮಣಕಾರಿ ಆಟದ ಮೂಲಕ ಫುಟ್‌ಬಾಲ್ ಪ್ರಿಯರ ಮನಸೆಳೆದಿರುವ ಜೆಮ್ಶೆಡ್‌ಪುರ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಸೋಮವಾರ ಕಣಕ್ಕೆ ಇಳಿಯಲಿವೆ.

ಎರಡನೇ ಸ್ಥಾನದಲ್ಲಿರುವ ಜೆಮ್ಶೆಡ್‌ಪುರ ಎಫ್‌ಸಿ ಮತ್ತು ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಎಫ್‌ಸಿ ತಂಡಗಳು ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಹೈದರಾಬಾದ್‌ನ ಬಾರ್ತೊಲೊಮೆ ಒಗ್ಬೆಚೆ ಮತ್ತು ಜೆಮ್ಶೆಡ್‌ಪುರ ಎಫ್‌ಸಿಯ ಡ್ಯಾನಿಯಲ್ ಚೀಮಾ ಚುಕುವು ಮೇಲೆ ಈ ಪಂದ್ಯದಲ್ಲಿ ಎಲ್ಲರ ನೋಟ ಬೀಳಲಿದೆ.

11 ಪಂದ್ಯಗಳಲ್ಲಿ 19 ಪಾಯಿಂಟ್ ಗಳಿಸಿರುವ ಜೆಮ್ಶೆಡ್‌ಪುರ ಎಫ್‌ಸಿ ಐದು ಪಂದ್ಯಗಳಲ್ಲಿ ಜಯ ಗಳಿಸಿದ್ದು ನಾಲ್ಕನ್ನು ಡ್ರಾ ಮಾಡಿಕೊಂಡಿದೆ. ಈ ವರೆಗೆ ತಂಡ ಒಟ್ಟು 18 ಗೋಲು ಗಳಿಸಿದೆ. ಎಸ್‌ಸಿ ಈಸ್ಟ್‌ ಬೆಂಗಾಲ್‌ ತಂಡದಿಂದ ಬಂದಿರುವ ನೈಜೀರಿಯಾ ಆಟಗಾರ ಚೀಮಾ ಅವರನ್ನು ಸೇರಿಸಿಕೊಂಡಿರುವುದರಿಂದ ತಂಡದ ಬಲ ಹೆಚ್ಚಿದೆ. ಈಸ್ಟ್ ಬೆಂಗಾಲ್‌ನಲ್ಲಿ ಅವರು ಎರಡು ಗೋಲು ಗಳಿಸಿದ್ದರು.

ADVERTISEMENT

ಹಿಂದಿನ ಪಂದ್ಯದಲ್ಲಿ ಜೆಮ್ಶೆಡ್‌ಪುರ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಪ್ರಯಾಸದ ಜಯ ಗಳಿಸಿತ್ತು. ಬದಲಿ ಆಟಗಾರನಾಗಿ ಬಂದಿದ್ದ ಇಶಾನ್ ಪಂಡಿತ ಗಳಿಸಿದ ಏಕೈಕ ಗೋಲಿನ ಬಲದಿಂದ ತಂಡ ಗೆಲುವು ಸಾಧಿಸಿತ್ತು. ಗ್ರೆಗ್ ಸ್ಟೀವರ್ಟ್‌ ಹಿಂದಿನ ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಚೀಮಾ ಜೊತೆ ಸ್ಟೀವರ್ಟ್‌ ಇನ್ನಷ್ಟು ಉತ್ತಮ ಆಟವಾಡುವ ನಿರೀಕ್ಷೆ ಇದೆ.

ಉತ್ತಮ ಲಯದಲ್ಲಿರುವ ಹೈದರಾಬಾದ್ ಎಫ್‌ಸಿ ಹಿಂದಿನ ಮೂರು ಪಂದ್ಯಗಳಲ್ಲಿ ಜಯ ಕಾಣಲಿಲ್ಲ. ಈ ಪೈಕಿ ಒಂದರಲ್ಲಿ ಸೋಲನ್ನೂ ಕಂಡಿದೆ. ಆದ್ದರಿಂದ ತಂಡ ಮತ್ತೆ ಜಯದ ಹಾದಿಗೆ ಮರಳುವ ನಿರೀಕ್ಷೆಯೊಂದಿಗೆ ಆಡಲಿದೆ. ಅಮಾನತಿನಲ್ಲಿದ್ದ ಕಾರಣ ಹಿಂದಿನ ಪಂದ್ಯದಲ್ಲಿ ಬಾರ್ತೊಲೊಮೆ ಒಗ್ಬೆಚೆ ಆಡಿರಲಿಲ್ಲ. ಈಗ ಅವರು ತಂಡಕ್ಕೆ ಮರಳಿದ್ದು ಅವರಿಗೆ ಜೊತೆ ನೀಡಲು ಜೇವಿಯರ್ ಸಿವೆರಿಯೊ ಕಾತರರಾಗಿದ್ದಾರೆ.

ಕೇರಳ ಬ್ಲಾಸ್ಟರ್ಸ್‌–ಮುಂಬೈ ಪಂದ್ಯ ಮುಂದೂಡಿಕೆ

ಕೇರಳ ಬ್ಲಾಸ್ಟರ್ಸ್ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವೆ ಭಾನುವಾರ ನಡೆಯಬೇಕಾಗಿದ್ದ ಪಂದ್ಯವನ್ನು ಮುಂದೂಡಲಾಗಿದೆ. ವಾಸ್ಕೊದ ತಿಲಕ್‌ ಮೈದಾನ್ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮತ್ತೊಂದು ದಿನ ಆಯೋಜಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಆದರೆ ಮುಂದೂಡಲು ನಿಖರ ಕಾರಣವೇನೆಂದು ಉಲ್ಲೇಖಿಸಿಲ್ಲ.

ಕೋವಿಡ್ ಕಾರಣದಿಂದ ಎರಡು ಪಂದ್ಯಗಳನ್ನು ಈಗಾಗಲೇ ಮುಂದೂಡಲಾಗಿದೆ. ಶನಿವಾರ ನಡೆಯಬೇಕಾಗಿದ್ದ ಬೆಂಗಳೂರು ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ನಡುವಿನ ಪಂದ್ಯವನ್ನು ಮುಂದೂಡಲಾಗಿತ್ತು. ಹಿಂದಿನ ವಾರ ನಡೆಯಬೇಕಾಗಿದ್ದ ಎಟಿಕೆ ಮೋಹನ್ ಬಾಗನ್ ಮತ್ತು ಒಡಿಶಾ ಎಫ್‌ಸಿ ನಡುವಿನ ಪಂದ್ಯವನ್ನೂ ಮುಂದೂಡಲಾಗಿತ್ತು. ಎಟಿಕೆ ಮೋಹನ್ ಬಾಗನ್ ತಂಡದ ನಾಲ್ವರು ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.