ADVERTISEMENT

ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌: ಜುಲೈ 27ರಿಂದ ಆರಂಭ

ಪಿಟಿಐ
Published 2 ಜುಲೈ 2024, 16:23 IST
Last Updated 2 ಜುಲೈ 2024, 16:23 IST
ಸಾಂದರ್ಭಿಕ ಚಿತ್ರ (ಪಿಟಿಐ) 
ಸಾಂದರ್ಭಿಕ ಚಿತ್ರ (ಪಿಟಿಐ)    

ಕೋಲ್ಕತ್ತಾ: ಡ್ಯುರಾಂಡ್ ಕಪ್ ಫುಟ್‌ಬಾಲ್ ಪಂದ್ಯಾವಳಿಯು ಜುಲೈ 27ರಂದು  ಆರಂಭವಾಗಲಿದ್ದು ಆಗಸ್ಟ್ 31ರವರೆಗೆ ನಡೆಯಲಿದೆ. ದೇಶದ ನಾಲ್ಕು ವಿವಿಧ ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ.

ಇಂಡಿಯನ್‌ ಸೂಪರ್‌ ಲೀಗ್‌, ಐ–ಲೀಗ್‌ನ ತಂಡಗಳು ಸೇರಿದಂತೆ ಇತರ ಆಹ್ವಾನಿತ ತಂಡಗಳು 133ನೇ ವರ್ಷದ ಈ ಟೂರ್ನಿಯಲ್ಲಿ ಭಾಗವಹಿಸಲಿವೆ. 

ರೌಂಡ್‌ ರಾಬಿನ್‌ ಮತ್ತು ನಾಕೌಟ್‌ ಮಾದರಿಯಲ್ಲಿ 43 ಪಂದ್ಯಗಳು ನಡೆಯಲಿವೆ. ಆರಂಭದ ಹಾಗೂ ಫೈನಲ್‌ ಪಂದ್ಯಕ್ಕೆ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡ್ಯುರಾಂಡ್ ಕಪ್ ಫುಟ್ಬಾಲ್ ಪಂದ್ಯಾವಳಿಯು ಏಷ್ಯಾದ ಅತ್ಯಂತ ಹಳೆಯ ಟೂರ್ನಿಯಾಗಿದೆ. 

ADVERTISEMENT

ಟೂರ್ನಿಯಲ್ಲಿ ಭಾಗವಹಿಸುವ 24 ತಂಡಗಳನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಮತ್ತು ಎರಡನೇ ಸ್ಥಾನ ಪಡೆದ ಎರಡು ಅತ್ಯುತ್ತಮ ತಂಡಗಳು ಸೇರಿ ಒಟ್ಟು ಎಂಟು ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯುತ್ತವೆ.

ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಅಂತರರಾಷ್ಟ್ರೀಯ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

ಟೂರ್ನಿಯನ್ನು ಪೂರ್ವ ಮತ್ತು ಈಶಾನ್ಯದ ಪ್ರದೇಶಗಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಾರ್ಖಂಡ್‌ನ  ಜಮ್ಶೆಡ್‌ಪುರ ಹಾಗೂ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲೂ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಕೋಲ್ಕತ್ತಾ ಮೂರು ಗುಂಪಿನ ಪಂದ್ಯಗಳಿಗೆ ಆತಿಥ್ಯ ವಹಿಸಿದರೆ, ಕೊಕರಾಜಾರ್‌, ಶಿಲ್ಲಾಂಗ್‌, ಜಮ್ಶೆಡ್‌ಪುರ ತಲಾ ಒಂದು ಗುಂಪಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡ ಹಾಲಿ ಚಾಂಪಿಯನ್‌ ಆಗಿದ್ದು, ಇತರ ತಂಡಗಳಿಗಿಂತ ಹೆಚ್ಚು, 17 ಬಾರಿ ಪ್ರಶಸ್ತಿ ಜಯಿಸಿದ ‌ದಾಖಲೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.