ವಾಸ್ಕೊ: ಅನಿಕೇತ್ ಜಾಧವ್ ಕಾಲ್ಚಳಕದ ಬಲದಿಂದ ಜೆಮ್ಶೆಡ್‌ಪುರ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಪಂದ್ಯದಲ್ಲಿ ಶುಕ್ರವಾರ 1–0 ಗೋಲಿನಿಂದ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು.
ಇಲ್ಲಿಯ ತಿಲಕ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಅನಿಕೇತ್ 53ನೇ ನಿಮಿಷದಲ್ಲಿ ತಂಡದ ಪರ ಗೋಲು ದಾಖಲಿಸಿದರು.
ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿಗಿಳಿದವು. 24ನೇ ನಿಮಿಷದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡಕ್ಕೆ ಫ್ರಿ ಕಿಕ್ ಅವಕಾಶವಿತ್ತು. ಆದರೆ ಕ್ವೇಸಿ ಅಪ್ಪಿಯಾ ಹೊಡೆದ ಚೆಂಡು ಎದುರಾಳಿ ತಂಡದ ಗೋಲುಕಂಬಕ್ಕೆ ಬಡಿಯಿತು. 43ನೇ ನಿಮಿಷದಲ್ಲಿ ನಾರ್ತ್‌ಈಸ್ಟ್ ತಂಡದ ಖಾಸ್ಸಾ ಕಮಾರ ಹಳದಿ ಕಾರ್ಡ್ ದರ್ಶನ ಮಾಡಿದರು.
ಮೊದಲಾರ್ಧ ಗೋಲುರಹಿತವಾಗಿ ಕೊನೆಗೊಂಡಿತು. ದ್ವಿತೀಯಾರ್ಧ ಆರಂಭವಾದ ಎಂಟನೇ ನಿಮಿಷದಲ್ಲಿ ಜಾಕಿಚಂದ್ ಸಿಂಗ್ ಅವರ ನೆರವಿನೊಂದಿಗೆ ಮುನ್ನುಗ್ಗಿದ ಅನಿಕೇತ್ ಮೋಡಿ ಮಾಡಿದರು. ನಾರ್ತ್‌ಈಸ್ಟ್ ಗೋಲ್‌ಕೀಪರ್‌ನನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಸಮಬಲ ಸಾಧಿಸುವ ಅವಕಾಶವೊಂದು ನಾರ್ತ್‌ಈಸ್ಟ್ ಎಫ್‌ಸಿಗೆ 66ನೇ ನಿಮಿಷದಲ್ಲಿ ಸಿಕ್ಕಿತ್ತು. ಆದರೆ ಇದ್ರಿಸ್ಸಾ ಸಿಲ್ಲಾ ಒದ್ದ ಚೆಂಡನ್ನು ಜೆಮ್ಶೆಡ್‌ಪುರ ಗೋಲ್‌ಕೀಪರ್ ಟಿ.ಪಿ.ರೆಹನೇಶ್ ಅದ್ಭುತವಾಗಿ ತಡೆದರು.
ಆ ಬಳಿಕ ಉಭಯ ತಂಡಗಳು ಪ್ರಯತ್ನ ನಡೆಸಿದರೂ ಯಶಸ್ಸು ಸಿಗಲಿಲ್ಲ. ನಾರ್ತ್‌ಈಸ್ಟ್ ಯುನೈಟೆಡ್ ತಂಡಕ್ಕೆ ಟೂರ್ನಿಯಲ್ಲಿ ಇದು ಮೊದಲ ಸೋಲು. ಆ ತಂಡ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜೆಮ್ಶೆಡ್‌ಪುರ ಅದಕ್ಕಿಂತ ಒಂದು ಸ್ಥಾನ (5) ಹಿಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.