ವಾಸ್ಕೊ: ಕ್ರಿಸ್‌ಮಸ್ ಬಿಡುವಿನ ನಂತರ ಗೋವಾದಲ್ಲಿ ಮತ್ತೆ ಫುಟ್‌ಬಾಲ್ ಕಲರವ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ‘ಬಾಕ್ಸಿಂಗ್ ಡೇ’ ಪಂದ್ಯದಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ತಂಡಗಳು ತಿಲಕ್ ಮೈದಾನ್ ಕ್ರೀಡಾಂಣದಲ್ಲಿ ಸೆಣಸಲಿವೆ.
ಎರಡೂ ತಂಡಗಳು ಎಂಟನೇ ಆವೃತ್ತಿಯಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದು ಏಳು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಗಳಿಸಿದ್ದು ಮೂರರಲ್ಲಿ ಡ್ರಾ ಸಾಧಿಸಿವೆ. ಮತ್ತು ಒಂದರಲ್ಲಿ ಮಾತ್ರ ಸೋತಿವೆ. ಗೋಲು ಗಳಿಕೆ ಆಧಾರದಲ್ಲಿ ಜೆಮ್ಶೆಡ್‌ಪುರ ಮೂರನೇ ಸ್ಥಾನ ಗಳಿಸಿದ್ದು ಕೇರಳ ಬ್ಲಾಸ್ಟರ್ಸ್ ನಂತರದ ಸ್ಥಾನದಲ್ಲಿದೆ.
ಕೇರಳ ಬ್ಲಾಸ್ಟರ್ಸ್ ಹಿಂದಿನ ಆರು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಜೆಮ್ಶೆಡ್‌ಪುರ ಕಳೆದ ಎರಡು ಪಂದ್ಯಗಳಲ್ಲಿ ಸೋತಿಲ್ಲ. ಬೆಂಗಳೂರು ಎಫ್‌ಸಿ ಎದುರಿನ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿರುವ ಜೆಮ್ಶೆಡ್‌ಪುರ ಭರವಸೆಯಲ್ಲಿದೆ. ಆಕ್ರಮಣ ವಿಭಾಗದಲ್ಲಿ ಈ ತಂಡ ಅಪ್ರತಿಮ ಸಾಮರ್ಥ್ಯ ತೋರುತ್ತಿದ್ದು ಗ್ರೆಗ್ ಸ್ಟಿವರ್ಟ್ ಇದರ ಚುಕ್ಕಾಣಿ ಹಿಡಿದಿದ್ದಾರೆ.
ಹಿಂದಿನ ವರ್ಷಗಳಲ್ಲಿ ಅನುಭವಿಸಿದ ಕಹಿ ಮರೆತು ಕೇರಳ ಬ್ಲಾಸ್ಟರ್ಸ್ ಮುನ್ನುಗ್ಗುತ್ತಿದ್ದು ಈ ತಂಡವೂ ಆಕ್ರಮಣಕಾರಿ ಆಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ತಂಡದ ರಕ್ಷಣಾ ಗೋಡೆಯನ್ನು ಛಿದ್ರ ಮಾಡಿರುವ ತಂಡ 3–0ಯಿಂದ ಜಯ ಗಳಿಸಿದೆ. ಸಹಾಲ್ ಅಬ್ದುಲ್ ಸಮದ್ ಅಮೋಘ ಫಾರ್ಮ್‌ನಲ್ಲಿದ್ದು ಎರಡು ಪಂದ್ಯಗಳಲ್ಲಿ ಸತತ ಗೋಲು ಗಳಿಸಿದ್ದಾರೆ. ರಕ್ಷಣಾ ವಿಭಾಗಕ್ಕೂ ಅವರು ಉತ್ತಮ ಕಾಣಿಕೆ ನೀಡಿದ್ದಾರೆ. ಈ ವರೆಗೆ 13 ಯಶಸ್ವಿ ಟ್ಯಾಕಲ್ ಮತ್ತು 11 ಬ್ಲಾಕ್‌ಗಳನ್ನು ಮಾಡಿದ್ದಾರೆ. ಅಡ್ರಿಯಾನ್ ಲೂನಾ ಕೂಡ ರಕ್ಷಣಾ ವಿಭಾಗದಲ್ಲಿ ಮಿಂಚುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.