ADVERTISEMENT

ಐಎಸ್‌ಎಲ್‌: ಕೇರಳಕ್ಕೆ ಲಯ ಕಂಡುಕೊಳ್ಳುವ ವಿಶ್ವಾಸ

ಮುಂಬೈ ಸಿಟಿ ಎಫ್‌ಸಿ ಎದುರಾಳಿ

ಪಿಟಿಐ
Published 2 ಫೆಬ್ರುವರಿ 2021, 13:31 IST
Last Updated 2 ಫೆಬ್ರುವರಿ 2021, 13:31 IST
ಕೇರಳ ಬ್ಲಾಸ್ಟರ್ಸ್ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಕೇರಳ ಬ್ಲಾಸ್ಟರ್ಸ್ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್‌: ಲಯಕ್ಕೆ ಮರಳಲು ಯತ್ನಿಸುತ್ತಿರುವ ಕೇರಳ ಬ್ಲಾಸ್ಟರ್ಸ್‌ ತಂಡವು ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಬಲಿಷ್ಠ ಮುಂಬೈ ಸಿಟಿ ಎದುರು ಸೆಣಸಲಿದೆ. ಜಿಎಂಸಿ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ.

ಟೂರ್ನಿಯಲ್ಲಿ ಇದುವರೆಗೆ ಆಡಿರುವ 15 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಜಯ ಸಾಧಿಸಿರುವ ಕೇರಳ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ಎದುರು ಆ ತಂಡದ ದಾಖಲೆ ಅತ್ಯಂತ ಕಳಪೆಯಾಗಿದೆ.

ಮುಂಬೈ ವಿರುದ್ಧ ಆಡಿದ ಕಳೆದ ಐದು ಪಂದ್ಯಗಳ ಪೈಕಿ ಕೇರಳ ತಂಡವು ಮೂರರಲ್ಲಿ ಸೋತಿದ್ದರೆ, ಎರಡರಲ್ಲಿ ಡ್ರಾ ಸಾಧಿಸಿದೆ.

ADVERTISEMENT

‘ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಉತ್ತಮ ತರಬೇತುದಾರರನ್ನು ಹೊಂದಿರುವ ಅದು ಉತ್ತಮ ತಂಡವೂ ಹೌದು. ಗೆಲುವಿನ ಲಯಕ್ಕೆ ಮರಳಲು ಈ ಪಂದ್ಯ ನಮಗೆ ಬಹುದೊಡ್ಡ ಸವಾಲಾಗಿದೆ‘ ಎಂದು ಕೇರಳ ತಂಡದ ಕೋಚ್ ಕಿಬು ವಿಕುನಾ ಹೇಳಿದ್ದಾರೆ.

ಕಳೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ ಸೆಣಸಿದ್ದ ಕೇರಳ 2–3ರಿಂದ ಸೋಲು ಅನುಭವಿಸಿತ್ತು.

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಕಳೆದ ಪಂದ್ಯಗಳಲ್ಲಿ ಸಪ್ಪೆ ಎನಿಸಿರುವ ಮುಂಬೈ ತಂಡವೂ ಲಯ ಮರಳಿ ಗಳಿಸಿಕೊಳ್ಳುವ ಹಂಬಲದಲ್ಲಿದೆ. ಕಳೆದ ನಾಲ್ಕು ಪಂದ್ಯಗಳ ಪೈಕಿ ಆ ತಂಡವು ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಹಿಂದಿನ ಪಂದ್ಯದಲ್ಲಿ ಅದು ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಸೋತಿತ್ತು.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.