ಮಡಗಾಂವ್: ಐಎಸ್‌ಎಲ್ ಟೂರ್ನಿಯ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಕೇರಳ ಬ್ಲಾಸ್ಟರ್ಸ್ ತಂಡವು, ಕೋಚ್ ಕಿಬು ವಿಕುನಾ ಅವರನ್ನು ಬುಧವಾರ ವಜಾಗೊಳಿಸಿದೆ. ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೇರಳ ಎಫ್‌ಸಿ 0–4ರಿಂದ ಹೈದರಾಬಾದ್ ಎಫ್‌ಸಿ ಎದುರು ಹೀನಾಯ ಸೋಲು ಅನುಭವಿಸಿತ್ತು.
ವಿಕುನಾ ಮಾರ್ಗದರ್ಶನದಲ್ಲಿ ಕೋಜಿಕ್ಕೋಡ್ ಮೂಲದ ತಂಡವು ಈ ಬಾರಿ ಕೇವಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಏಳು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಎಂಟು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 11 ತಂಡಗಳಿರುವ ಲೀಗ್ ಪಟ್ಟಿಯಲ್ಲಿ ಕೇರಳ ಸದ್ಯ 10ನೇ ಸ್ಥಾನದಲ್ಲಿದೆ.
ತಂಡವು ಆಡಬೇಕಿರುವ ಅಷ್ಟೇನೂ ಮುಖ್ಯವಲ್ಲದ ಇನ್ನೆರಡು ಪಂದ್ಯಗಳಲ್ಲಿ ಸಹಾಯಕ ಕೋಚ್ ಇಷ್ಫಾಕ್ ಅಹಮದ್ ಅವರು ಹಂಗಾಮಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
‘ಪರಸ್ಪರ ಒಪ್ಪಿಗೆ‘ಯ ಮೇರೆಗೆ ವಿಕುನಾ ಕೋಚ್ ಹುದ್ದೆ ತೊರೆದಿದ್ದಾರೆ ಎಂದು ಕ್ಲಬ್ ಹೇಳಿಕೊಂಡಿದೆ.
ಹೋದ ವರ್ಷದ ಐ–ಲೀಗ್ ಟೂರ್ನಿಯಲ್ಲಿ ಮೋಹನ್ ಬಾಗನ್ ತಂಡಕ್ಕೆ ತರಬೇತಿ ನೀಡಿದ್ದ ವಿಕುನಾ, ತಂಡವನ್ನು ಚಾಂಪಿಯನ್ ಆಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.