ಬ್ಯಾಂಬೊಲಿಮ್, ಗೋವಾ: ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಕೊನೆಯ ಅವಕಾಶವೊಂದು ಉಳಿದಿದೆ. ಲೀಗ್ ಹಂತದಲ್ಲಿ ತಂಡಕ್ಕೆ ಇನ್ನು ಮೂರು ಪಂದ್ಯಗಳು ಉಳಿದಿದ್ದು ಆ ಮೂರು ಪಂದ್ಯಗಳಲ್ಲಿ ಗೆದ್ದರೆ ಕನಸು ನನಸಾಗಲಿದೆ. ಇದಕ್ಕೆ ಶನಿವಾರ ನಾಂದಿ ಹಾಡಬೇಕಾಗಿದೆ.
ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ತಂಡ ಆತಿಥೇಯ ಎಫ್‌ಸಿ ಗೋವಾವವನ್ನು ಎದುರಿಸಲಿದ್ದು ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಈ ಬಾರಿ ಇಲ್ಲಿಯ ವರೆಗೆ ಗುರಿಯತ್ತ ಚೆಂಡನ್ನು ಕೊಂಡೊಯ್ಯುವುದರಲ್ಲಿ ಮತ್ತು ಅವಕಾಶಗಳನ್ನು ಸೃಷ್ಟಿಸುವಲ್ಲಿ ಚೆನ್ನೈಯಿನ್ ಹೆಚ್ಚು ವೈಫಲ್ಯ ಕಂಡಿಲ್ಲ. ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಈ ಎರಡು ವಿಭಾಗಗಳಲ್ಲಿ ತಂಡ ಎರಡನೇ ಸ್ಥಾನದಲ್ಲಿದೆ. ಆದರೆ ಗೋಲು ಗಳಿಕೆಯಲ್ಲಿ ತಂಡ ಹಿಂದುಳಿದಿದೆ. ಆಡಿರುವ 17 ಪಂದ್ಯಗಳ ಪೈಕಿ 10ರಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಅದಕ್ಕೆ ಸಾಧ್ಯವಾಗಲಿಲ್ಲ.
ಗೋವಾ ಈ ಪಂದ್ಯದಲ್ಲಿ ಜಯ ಗಳಿಸಿದರೆ ಪ್ಲೇ ಆಫ್ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ತಂಡ ಈ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಕ್ಲೀನ್‌ಶೀಟ್ ಸಾಧನೆ ಮಾಡಿದೆ. ಆದ್ದರಿಂದ ಚೆನ್ನೈಯಿನ್‌ಗೆ ಗೋಲು ಬಿಟ್ಟುಕೊಡದೇ ಇರಲು ಪ್ರಯತ್ನಿಸುವ ಸವಾಲು ತಂಡಕ್ಕೆ ಇದೆ.
‘ಚೆನ್ನೈಯಿನ್ ತಂಡದಲ್ಲಿ ಸಮಸ್ಯೆಗಳು ಇವೆ. ಆದರೂ ಅದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಮೊದಲ ಲೆಗ್‌ನಲ್ಲಿ ಮುಖಾಮುಖಿಯಾದಾಗ ಅದು ಚೆನ್ನಾಗಿ ಆಡಿತ್ತು. ಆದ್ದರಿಂದ ನಮ್ಮ ಆಟಗಾರರು ಶನಿವಾರ ಎಚ್ಚರಿಕೆಯ ಆಟವಾಡಲಿದ್ದಾರೆ’ ಎಂದು ಗೋವಾ ಕೋಚ್ ಜುವಾನ್ ಫೆರಾಂಡೊ ಹೇಳಿದರು.
‘ಹಿಂದಿನ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ 0–1 ಅಂತರದಲ್ಲಿ ತಂಡ ಸೋತಿದೆ. ಆ ಪಂದ್ಯದಲ್ಲಿ ಜಯ ಗಳಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಉಡುಗೊರೆ ಗೋಲು ನೀಡಿ ತಂಡ ಹಿನ್ನಡೆ ಅನುಭವಿಸಿತು. ಅದು ನೋವಿನ ವಿಷಯ. ಆದರೂ ಸೋಲಿನ ಕಹಿಯನ್ನು ಮರೆತು ಮುಂದಿನ ಹಣಾಹಣಿಗೆ ಸಜ್ಜಾಗಿದ್ದೇವೆ’ ಎಂದು ಚೆನ್ನೈಯಿನ್ ಕೋಚ್ ಕ್ಸಾಬಾ ಲಾಜೆಲೊ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.