ADVERTISEMENT

ಫುಟ್‌ಬಾಲ್‌ ಮಾಂತ್ರಿಕರ ಫಿಟ್‌ನೆಸ್‌ ಮಂತ್ರ...

ಜಿ.ಶಿವಕುಮಾರ
Published 10 ಮೇ 2020, 20:15 IST
Last Updated 10 ಮೇ 2020, 20:15 IST
ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ
ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ   
""

ಕ್ರಿಸ್ಟಿಯಾನೊ ರೊನಾಲ್ಡೊ...ಲಯೊನೆಲ್‌ ಮೆಸ್ಸಿ...

ಮಾಂತ್ರಿಕ ಆಟದ ಮೂಲಕ ಫುಟ್‌ಬಾಲ್‌ ಪ್ರಿಯರ ಮನದಲ್ಲಿ ಶಾಶ್ವತ ನೆಲೆ ಕಂಡುಕೊಂಡಿರುವ ದಿಗ್ಗಜರಿವರು.

ಮನಮೋಹಕ ಹೆಡರ್‌, ಆಕರ್ಷಕ ಡ್ರಿಬ್ಲಿಂಗ್‌, ಸೈಕಲ್‌ ಕಿಕ್‌ಗಳ ಮೂಲಕ ಮೈದಾನದಲ್ಲಿ ಮಿಂಚು ಹರಿಸುತ್ತಿದ್ದ ಈ ತಾರೆಯರು ಈಗ ಗೃಹಬಂಧಿಗಳಾಗಿದ್ದಾರೆ. ಲಾಕ್‌ಡೌನ್‌ನಿಂದ ಸಿಕ್ಕಿರುವ ರಜೆಯಲ್ಲಿ ಕುಟುಂಬದ ಜೊತೆ ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಫಿಟ್‌ನೆಸ್‌ಗೂ ಒತ್ತು ನೀಡಿದ್ದಾರೆ. ಮನೆಗಳಲ್ಲಿರುವ ಜಿಮ್‌ಗಳಲ್ಲಿ ನಿತ್ಯವೂ ಬೆವರು ಹರಿಸುತ್ತಾ ತಮ್ಮ ಅಸಂಖ್ಯ ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ADVERTISEMENT

ಫಿಟ್‌ನೆಸ್‌ ವಿಚಾರದಲ್ಲಿ ರೊನಾಲ್ಡೊ ಎಲ್ಲಾ ಕ್ರೀಡಾಪಟುಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. 35ರ ಹರೆಯದಲ್ಲೂ ಆಕರ್ಷಕ ಅಂಗಸೌಷ್ಠವ ಕಾಪಾಡಿಕೊಂಡಿರುವಅವರು ಮೈದಾನವಷ್ಟೇ ಅಲ್ಲದೇ‌ ಜಿಮ್‌ನಲ್ಲೂ ಕಠಿಣ ಕಸರತ್ತುಗಳನ್ನು ಮಾಡುತ್ತಾರೆ.ಪೋರ್ಚುಗಲ್‌ನ ಈ ತಾರೆ ದಿನವೊಂದಕ್ಕೆ ಕನಿಷ್ಠ ನಾಲ್ಕು ಗಂಟೆಯಂತೆ ವಾರದಲ್ಲಿ ಐದು ದಿನ ಜಿಮ್‌ನಲ್ಲಿ ದೇಹ ದಂಡಿಸುತ್ತಾರೆ.

ದಿನದಲ್ಲಿ ಅರ್ಧ ಗಂಟೆ ಸಮಯವನ್ನು ಕಾರ್ಡಿಯೊ ವ್ಯಾಯಾಮಗಳಿಗೆ ಮೀಸಲಿಡುವ ಅವರು ಪ್ರತಿ ಸೋಮವಾರ ಬ್ರಾಡ್‌ ಜಂಪ್‌, ಜಂಪಿಂಗ್‌ ಲಂಚಸ್‌, ಬಾರ್ಬೆಲ್‌ ಸ್ಕ್ವಾಟ್‌, ಬಾಕ್ಸ್‌ ಜಂಪ್‌ ಹಾಗೂ ಲ್ಯಾಟರಲ್ ಬೌಂಡ್‌ ವ್ಯಾಯಾಮಗಳನ್ನು ಮಾಡುತ್ತಾರೆ. ಮಂಗಳವಾರ ವಿಶ್ರಾಂತಿ ಪಡೆಯುತ್ತಾರೆ.

ಬುಧವಾರ ಬರ್ಫಿ ಪುಲ್‌ಅಪ್‌, ಬೆಂಚ್‌ ಡಿಪ್ಸ್‌, ಪುಶಪ್ಸ್‌, ಮೆಡಿಸಿನ್‌ ಬಾಲ್‌ ಟಾಸ್ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿ ಗುರುವಾರ 200 ಮೀಟರ್ಸ್‌ ದೂರವನ್ನು ಎಂಟು ಬಾರಿ ಓಡುವಮೂಲಕ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗದಂತೆ ಎಚ್ಚರವಹಿಸುತ್ತಾರೆ.

ಶುಕ್ರವಾರಒನ್‌ ಆರ್ಮ್‌ ಸೈಡ್‌ ಡೆಡ್‌ಲಿಫ್ಟ್‌, ಡಂಬೆಲ್‌ ಒನ್‌ ಲೆಗ್ಗಡ್‌ ಡೆಡ್‌ಲಿಫ್ಟ್‌, ಓವರ್‌ಹೆಡ್‌ ಸ್ಲಾಮ್‌, ಒನ್‌ ಲೆಗ್‌ ಬಾರ್ಬೆಲ್‌ ಸ್ಕ್ವಾಟ್‌, ಹ್ಯಾಂಗಿಂಗ್‌ ಲೆಗ್‌ರೈಸ್‌ ಕಸರತ್ತುಗಳನ್ನು ಮಾಡುವ ಅವರು ಶನಿವಾರ ವಿಶ್ರಾಂತಿ ಪಡೆಯುತ್ತಾರೆ. ಭಾನುವಾರ ರೋಪ್‌ ಜಂಪಿಂಗ್‌ ಜೊತೆಗೆ 50 ಮೀಟರ್ಸ್‌ ದೂರವನ್ನು 10 ಬಾರಿ ಓಡುತ್ತಾರೆ (ರೆಸಿಸ್ಟೆಂಟ್‌ ಸ್ಪ್ರಿಂಟಿಂಗ್‌).

ಮನೆಯ ಆವರಣದಲ್ಲಿರುವ ಸಿಮೆಂಟ್‌ ದಿಬ್ಬವನ್ನು ಸಾಧ್ಯವಾದಷ್ಟು ವೇಗವಾಗಿ ಹತ್ತುವ ಹಾಗೂ ಇಳಿಯುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಅವರು ತಮ್ಮ ಐಷಾರಾಮಿ ಬಂಗಲೆಯ ತಾರಸಿಯ ಮೇಲಿರುವ ಈಜುಕೊಳದಲ್ಲಿ ಈಜುತ್ತಾ ಒಂದಷ್ಟು ಸಮಯ ಕಳೆಯುತ್ತಾರೆ.

ಪೋರ್ಚುಗಲ್‌ನ ಈ ತಾರೆ ಡಯೆಟ್‌ ವಿಚಾರದಲ್ಲೂ ತುಂಬಾ ಕಟ್ಟುನಿಟ್ಟು. ಪ್ರತಿ ನಿತ್ಯ ಮೂರು ಗಂಟೆಗೊಮ್ಮೆ ಮಿತ ಆಹಾರ ಸೇವಿಸುತ್ತಾರೆ. ಮೊಟ್ಟೆಯ ಬಿಳಿ ಭಾಗ, ತಾಜಾ ಹಣ್ಣಿನ ಜ್ಯೂಸ್‌, ಬೇಯಿಸಿದ ಆಲೂಗೆಡ್ಡೆ, ಹಸಿರು ತರಕಾರಿಗಳು, ಕೋಳಿಯ ಎದೆ ಭಾಗದ ಮಾಂಸವೂ ಇವರ ಆಹಾರದ ಮೆನುವಿನಲ್ಲಿವೆ.ತಾಜಾ ಮೀನಿನ ಖಾದ್ಯಗಳನ್ನು ಅವರು ಹೆಚ್ಚು ಇಷ್ಟಪಡುತ್ತಾರೆ.

ಮದ್ಯಪಾನ, ಧೂಮಪಾನ ಹಾಗೂ ತಂಪು ಪಾನೀಯಗಳಿಂದ ದೂರ ಇರುವ ರೊನಾಲ್ಡೊ, ಪ್ರೋಟಿನ್‌‌ ಶೇಖ್‌ಗಳನ್ನು ಕುಡಿಯುತ್ತಾರೆ. ಪ್ರತಿ ನಿತ್ಯ ಎಂಟು ಗಂಟೆ ನಿದ್ರಿಸುತ್ತಾರೆ.

ಮಾದರಿಯಾದ ಮೆಸ್ಸಿ

ಅಂಗಳದಲ್ಲಿ ಪಾದರಸದಂತೆ ಓಡುವುದು, ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸುವುದು ಹಾಗೂ ಚೆಂಡನ್ನು ಆಕರ್ಷಕ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ರಕ್ಷಣಾ ಕೋಟೆಯೊಳಗೆ ನುಗ್ಗುವುದರಲ್ಲಿ 32 ವರ್ಷ ವಯಸ್ಸಿನ ಮೆಸ್ಸಿ ನಿಪುಣರಾಗಿದ್ದಾರೆ.

ಲಯೊನೆಲ್‌ ಮೆಸ್ಸಿ

ಅಂಗಳದಲ್ಲಿ ಸದಾ ಲವಲವಿಕೆಯಿಂದ ಇರುವ ಈ ಆಟಗಾರ ಸ್ನಾಯುಗಳು ಮತ್ತು ಮಾಂಸಖಂಡಗಳ ಬಲವರ್ಧನೆಗೆ ಅನುವಾಗುವಂತಹ ಪಿಲ್ಲರ್‌ ಸ್ಕಿಪ್, ಪಿಲ್ಲರ್‌ ಬ್ರಿಡ್ಜ್‌ ಫ್ರಂಟ್‌, ಇನ್ವರ್ಟೆಡ್‌ ಹ್ಯಾಮ್‌ಸ್ಟ್ರಿಂಗ್‌ ಸ್ಟ್ರೆಚಸ್‌, ಹರ್ಡಲ್‌ ಹಾಪ್‌ ಹಾಗೂ ಸ್ಪ್ಲಿಟ್‌‌ ಸ್ಕ್ವಾಟ್ಸ್‌ ವ್ಯಾಯಾಮಗಳಿಗೆ ಆದ್ಯತೆ ನೀಡುತ್ತಾರೆ. ಭಾರ ಎತ್ತುವ ಕಸರತ್ತುಗಳನ್ನೂ ಮಾಡುವ ಅವರುಟ್ರೆಡ್‌ಮಿಲ್‌ನಲ್ಲಿ ಓಡುವ ಮೂಲಕವೂ ಅನಗತ್ಯ ಕ್ಯಾಲೋರಿಯನ್ನು ಕರಗಿಸುತ್ತಾರೆ.

ಆರ್ಜೆಂಟೀನಾದ ಮೆಸ್ಸಿ, ಕಟ್ಟುನಿಟ್ಟಿನ ಡಯಟ್‌ ಪಾಲಿಸುತ್ತಾರೆ. ಮಾಂಸಾಹಾರವನ್ನು ತ್ಯಜಿಸಿರುವ ಅವರು ಪಿಜ್ಜಾ ತಿನ್ನುವುದನ್ನೂ ಬಿಟ್ಟಿದ್ದಾರೆ.ಬೆಳಿಗ್ಗೆ ಉಪಹಾರದಲ್ಲಿ ಮೊಟ್ಟೆಯ ಬಿಳಿ ಭಾಗ ಹಾಗೂ ತಾಣಾ ಹಣ್ಣುಗಳನ್ನು ಸೇವಿಸುತ್ತಾರೆ. ತಾಜಾ ತರಕಾರಿಗಳು, ಕಾಳುಗಳು ಹಾಗೂ ದ್ವಿದಳ ಧಾನ್ಯಗಳೂ ಅವರ ಮೆನುವಿನಲ್ಲಿವೆ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವ ಅವರು ಸಕ್ಕರೆ ಪದಾರ್ಥಗಳಿಂದ ದೂರವಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.