ಪ್ಯಾರಿಸ್: ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರು ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರನಿಗೆ ನೀಡುವ ಪ್ರತಿಷ್ಠಿತ ‘ಬ್ಯಾಲನ್ ಡಿ ಒರ್’ ಪ್ರಶಸ್ತಿಗೆ ದಾಖಲೆಯ ಎಂಟನೇ ಬಾರಿ ಭಾಜನರಾದರು.
ಪ್ಯಾರಿಸ್‌ನಲ್ಲಿ ಸೋಮವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳೆಯರ ವಿಭಾಗದಲ್ಲಿ ಈ ಗೌರವವನ್ನು ವಿಶ್ವಕಪ್ ವಿಜೇತ ಸ್ಪೇನ್ ತಂಡದ ಐತಾನ ಬೊನ್ಮತಿ ಪಡೆದರು.
ಫ್ರಾನ್ಸ್‌ನ ಕಿಲಿಯಾನ್ ಎಂಬಾಪೆ ಮತ್ತು ನಾರ್ವೆಯ ಎರ್ಲಿಂಗ್ ಹಾಲಾಂಡ್ ಅವರನ್ನು ಹಿಂದಿಕ್ಕುವಲ್ಲಿ ಮೆಸ್ಸಿ ಯಶಸ್ವಿಯಾದರು. ಕಳೆದ ವರ್ಷ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಟ್ರೋಫಿ ಜಯಿಸುವಲ್ಲಿ ಮೆಸ್ಸಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆದ್ದರಿಂದ ಅವರು ಬಾರಿ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾಗಿತ್ತು.
'ಈ ಪ್ರಶಸ್ತಿಯು ವಿಶ್ವಕಪ್ ಗೆದ್ದ ಅರ್ಜೆಟೀನಾ ತಂಡಕ್ಕೆ ದೊರೆತ ಉಡುಗೊರೆಯಾಗಿದೆ’ ಎಂದು ಮೆಸ್ಸಿ ಪ್ರತಿಕ್ರಿಯಿಸಿದರು. ತಮ್ಮ ಎಂಟನೇ ಟ್ರೋಫಿಯನ್ನು ಅವರು ಅರ್ಜೆಂಟೀನಾದ ದಿಗ್ಗಜ ಆಟಗಾರ ಡಿಯಾಗೊ ಮರಡೋನಾ ಅವರಿಗೆ ಅರ್ಪಿಸಿದರು.
36 ವರ್ಷದ ಮೆಸ್ಸಿ ಅವರಿಗೆ 2009 ರಿಂದ 2012ರ ವರೆಗೆ ಸತತ ನಾಲ್ಕು ವರ್ಷ ಈ ಪ್ರಶಸ್ತಿ ಒಲಿದಿತ್ತು. ಆ ಬಳಿಕ 2015, 2019 ಮತ್ತು 2021 ರಲ್ಲೂ ಜಯಿಸಿದ್ದರು. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಐದು ಸಲ ಈ ಪ್ರಶಸ್ತಿ ಜಯಿಸಿದ್ಧಾರೆ. ಕಳೆದ ವರ್ಷ ಫ್ರಾನ್ಸ್‌ನ ಕರೀಂ ಬೆಂಜೆಮಾ ಅವರಿಗೆ ಗೌರವ ಲಭಿಸಿತ್ತು.
ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸ್ಪೇನ್ ತಂಡದ ಮಿಡ್‌ಫೀಲ್ಡರ್ ಬೊನ್ಮತಿ ಅವರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಶ್ರೇಷ್ಠ ಆಟಗಾರ್ತಿ’ ಎನಿಸಿಕೊಂಡಿದ್ದರು. 25 ವರ್ಷದ ಅವರು ಬಾರ್ಸಿಲೋನಾ ತಂಡ ಕಳೆದ ಋತುವಿನಲ್ಲಿ ಚಾಂಪಿಯನ್ಸ್ ಲೀಗ್ ಟೂರ್ನಿ ಗೆಲ್ಲುವಲ್ಲೂ ಕೊಡುಗೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.