ಮಡಗಾಂವ್:ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಕೋಲ್ಕತ್ತ ಮೂಲದ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡಗಳ ನಡುವಣ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಶನಿವಾರ ಫಟೋರ್ಡ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಏಳನೇ ಆವೃತ್ತಿಯ ಪ್ರಶಸ್ತಿಗಾಗಿ ಸೆಣಸಲಿವೆ.
ಈ ಆವೃತ್ತಿಯು ಇದುವರೆಗೆ 114 ಪಂದ್ಯಗಳು, 295 ಗೋಲುಗಳು, 87,811 ಪಾಸ್‌ಗಳು ಹಾಗೂ 7, 307 ಟ್ಯಾಕಲ್‌ಗಳಿಗೆ ಸಾಕ್ಷಿಯಾಗಿದೆ.
ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ 12 ಪಂದ್ಯಗಳಲ್ಲಿ ಗೆದ್ದು, ತಲಾ ನಾಲ್ಕು ಪಂದ್ಯಗಳಲ್ಲಿ ಸೋಲು ನಿರಾಸೆ ಅನುಭವಿಸಿವೆ. ಸೆಮಿಫೈನಲ್‌ನಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿರುವ ಮುಂಬೈ ಸಿಟಿ ತಂಡ ತುಸು ಹೆಚ್ಚೇ ಆತ್ಮವಿಶ್ವಾಸದಲ್ಲಿದೆ.
ಲೀಗ್ ಹಂತದಲ್ಲಿ ಎಟಿಕೆಎಂಬಿ ಎದುರಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮುಂಬೈ ‘ಲೀಗ್ ವಿಜೇತರು‘ ಎಂಬ ಹಿರಿಮೆಗೂ ಪಾತ್ರವಾಗಿದೆ. ಇದೇ ಮೊದಲ ಬಾರಿ ಫೈನಲ್ ತಲುಪಿರುವ ಆ ತಂಡವು ಚಾಂಪಿಯನ್ ಪಟ್ಟದ ನಿರೀಕ್ಷೆಯಲ್ಲಿದೆ. ಕೋಚ್ ಸೆರ್ಜಿಯೊ ಲೋಬೆರಾ ಕೂಡ ಇದೇ ವಿಶ್ವಾಸದಲ್ಲಿದ್ದಾರೆ.
‘ಎಟಿಕೆಎಂಬಿ ಉತ್ತಮ ಆಟಗಾರರನ್ನು ಒಳಗೊಂಡ ಅತ್ಯುತ್ತಮ ತಂಡ. ಆದರೆ ನಾವು ಪಂದ್ಯದ ಮೇಲೆ ಹೆಚ್ಚು ಗಮನಹರಿಸಿ, ಸಾಧ್ಯವಾದಷ್ಟು ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸುತ್ತೇವೆ. ಯಾವುದೇ ವಿಶೇಷವಾದ ಕಾರ್ಯತಂತ್ರಗಳನ್ನು ಹೆಣೆದಿಲ್ಲ. ಶತ ಪ್ರತಿಶತ ಪ್ರಯತ್ನ ಇದ್ದೇ ಇರುತ್ತದೆ‘ ಎಂದು ಲೋಬೆರಾ ಹೇಳಿದ್ದಾರೆ.
ಮುಂಬೈ ತಂಡದ ಆಯ್ಕೆಯಲ್ಲಿ ಒಂದಷ್ಟು ಗೊಂದಲಗಳಿವೆ. ಮಂದಾರ ರಾವ್ ದೇಸಾಯಿ ಅಮಾನತುಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಬೇಕಿದೆ.
ನಾಕೌಟ್ ಪಂದ್ಯಗಳಲ್ಲಿ ಅದ್ಭುತ ದಾಖಲೆಗಳ ಬಲ ಹೊಂದಿರುವ ಆಂಟೋನಿಯೊ ಹಬಾಸ್ ತರಬೇತಿಯಲ್ಲಿ ಎಟಿಕೆಎಂಬಿ ಪಳಗಿದೆ. ಅವರ ನೇತೃತ್ವದಲ್ಲಿ ಎಟಿಕೆ ತಂಡವು ಈಗಾಗಲೇ ಎರಡು ಬಾರಿ ಪ್ರಶಸ್ತಿ ಜಯಿಸಿದೆ. ಇಲ್ಲಿ ಗೆದ್ದರೆ ಸತತ ಎರಡನೇ ಬಾರಿ (ಒಟ್ಟಾರೆ ಮೂರು) ತಂಡವೊಂದನ್ನು ಚಾಂಪಿಯನ್ ಆಗಿಸಿದ ಶ್ರೇಯ ಅವರ ಪಾಲಾಗಲಿದೆ.
‘ಎದುರಾಳಿಗಳ ಎದುರು ಗೆಲ್ಲುವೊಂದೇ ನಮ್ಮ ಕಾರ್ಯತಂತ್ರ. ಈ ಹಣಾಹಣಿಗೆ ನಮ್ಮ ತಂಡ ಸಂಪೂರ್ಣ ಸಜ್ಜಾಗಿದೆ. ಹಿಂದಿನ ಪಂದ್ಯಗಳ ಫಲಿತಾಂಶಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ‘ ಎಂದು ಹಬಾಸ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.