ADVERTISEMENT

‘ಗೋಲ್ಡನ್‌ ಬಾಲ್‌’ ಹರಾಜು ತಡೆಗೆ ಯತ್ನ

ಟ್ರೋಫಿ ಕಳವಾಗಿತ್ತು: ಮರಡೋನಾ ವಾರಸುದಾರರು

ಏಜೆನ್ಸೀಸ್
Published 14 ಮೇ 2024, 15:42 IST
Last Updated 14 ಮೇ 2024, 15:42 IST
<div class="paragraphs"><p>ಮರಡೋನಾ</p></div>

ಮರಡೋನಾ

   

ಪ್ಯಾರಿಸ್‌: ಫುಟ್‌ಬಾಲ್‌ ದಂತಕತೆ, ಆರ್ಜೆಂಟೀನಾದ ಡೀಗೊ ಮರಡೋನಾ ಅವರು 1986ರ ವಿಶ್ವಕಪ್‌ ಸಂದರ್ಭದಲ್ಲಿ ಗೆದ್ದುಕೊಂಡ ‘ಗೋಲ್ಡನ್‌ ಬಾಲ್‌’ ಟ್ರೋಫಿ ಹರಾಜು ಹಾಕುವುದನ್ನು ತಡೆಯಲು ಕಾನೂನು ಮಾರ್ಗದ ಮೂಲಕ ಪ್ರಯತ್ನಿಸುವುದಾಗಿ ಅವರ ವಾರಸುದಾರರು ತಿಳಿಸಿದ್ದಾರೆ.

ಮರಡೋನಾ ಅವರ ವಾರಸುದಾರರ ವಕೀಲರು ಮಂಗಳವಾರ ಎಪಿ ಸುದ್ದಿಸಂಸ್ಥೆಗೆ ಈ ವಿಷಯ ಖಚಿತಪಡಿಸಿದ್ದಾರೆ.

ADVERTISEMENT

ಮೆಕ್ಸಿಕೊ ಸಿಟಿಯಲ್ಲಿ ನಡೆದ ಆ ವರ್ಷದ ವಿಶ್ವಕಪ್‌ ಫೈನಲ್‌ನಲ್ಲಿ ಆರ್ಜೆಂಟೀನಾ ತಂಡ, ಮರೋಡನಾ ನೇತೃತ್ವದಲ್ಲಿ ಆಗಿನ ಪಶ್ಚಿಮ ಜರ್ಮನಿ ತಂಡವನ್ನು 3–2 ಗೋಲುಗಳಿಂದ ಸೋಲಿಸಿ ಟ್ರೋಫಿ ಎತ್ತಿಹಿಡಿದಿತ್ತು. ಟೂರ್ನಿಯ ಶ್ರೇಷ್ಠ ಆಟಗಾರನಿಗೆ ನೀಡುವ ಗೋಲ್ಡನ್‌ ಬಾಲ್‌ ಪ್ರಶಸ್ತಿಯನ್ನು ಆ ತಂಡದ ನಾಯಕರಾಗಿದ್ದ ಮರಡೋನಾ ಅವರಿಗೆ ಸಂದಿತ್ತು.

ನಿಗೂಢ ಸಂದರ್ಭದಲ್ಲಿ ಗೋಲ್ಡನ್‌ ಬಾಲ್‌ ಟ್ರೋಫಿ ಕಾಣೆಯಾಗಿತ್ತು. ದಶಕಗಳ ನಂತರ ಈ ಟ್ರೋಫಿ ಇತ್ತೀಚೆಗಷ್ಟೇ ಮತ್ತೆ ಕಾಣಿಸಿಕೊಂಡಿತ್ತು. ಮುಂದಿನ ತಿಂಗಳು ಪ್ಯಾರಿಸ್‌ನಲ್ಲಿ ಈ ಟ್ರೋಫಿಯನ್ನು ಹರಾಜು ಹಾಕುವುದಾಗಿ ಆಗಾಟೆಸ್‌ ಹರಾಜು ಸಂಸ್ಥೆ ಇತ್ತೀಚೆಗೆ ತಿಳಿಸಿತ್ತು.‌

ಮರಡೋನಾ 2020ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ಮೃತರಾಗಿದ್ದರು.

‘ಕಳವಾದ ಟ್ರೋಫಿ ಇದಾಗಿದೆ. ಹೀಗಾಗಿ ಅದರ ಈಗಿನ ಮಾಲೀಕರು ಅದನ್ನು ಮಾರುವ ಹಾಗಿಲ್ಲ’ ಎಂಬುದು ಮರಡೋನಾ ಅವರ ವಾರಸುದಾರರ ವಾದವಾಗಿದೆ.

ಹರಾಜಿಗೆ ಇಡಲಾಗಿರುವ ವಸ್ತುಗಳ ಪಟ್ಟಿಯಿಂದ ಗೋಲ್ಡನ್‌ ಬಾಲ್‌ ಹಿಂಪಡೆಯುವಂತೆ ನಾಂಟೆರೆ ನ್ಯಾಯಾಲಯಕ್ಕೆ ತುರ್ತಾಗಿ ಮನವಿ ಮಾಡುವುದಾಗಿ ಪ್ಯಾರಡಾಕ್ಸ್‌ ಲಾಯರ್ಸ್‌ ಫರ್ಮ್‌ನ ವಕೀಲ ಗಿಲ್ಲೆಸ್‌ ಮೊರೆ ತಿಳಿಸಿದ್ದಾರೆ. ಈ ಟ್ರೋಫಿ ಕಳವಾಗಿದ್ದು, ಇದನ್ನು ನ್ಯಾಯಾಲಯ ತನ್ನ ಸುಪರ್ದಿಗೆ ಪಡೆಯುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಟ್ರೋಫಿ 2016ರಲ್ಲಿ ಮತ್ತೆ ಪತ್ತೆಯಾಗಿದೆ. ಖಾಸಗಿ ಸಂಗ್ರಾಹಕರ ಬಳಿಯಿಂದ ಹರಾಜು ಮೂಲಕ ಪಡೆದಿದ್ದ  ಅಮೂಲ್ಯ ವಸ್ತುಗಳಲ್ಲಿ ಇದೂ ಒಳಗೊಂಡಿದೆ ಎಂದು ಆಗಾಟೆಸ್‌ ತಿಳಿಸಿದೆ.

ಆದು ನಾಪತ್ತೆಯಾಗಲು ನಾನಾ ಕಾರಣಗಳನ್ನು ಹೇಳಲಾಗುತ್ತಿದೆ. ಇದನ್ನು ಅವರು ಪೊಕರ್‌ ಗೇಮ್‌ ವೇಳೆ ಕಳೆದುಕೊಂಡಿದ್ದಾರೆ ಅಥವಾ ಸಾಲ ತೀರಿಸಲು ಮಾರಿರಬಹುದು ಎಂದು ಆಗಾಟೆಸ್‌ ಹೇಳಿದೆ. ಮರಡೋನಾ ಇಟಾಲಿಯನ್‌ ಲೀಗ್ ಆಡುವ ಸಂದರ್ಭದಲ್ಲಿ ಇದನ್ನು ನೇಪಲ್ಸ್‌ ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದರು. ಅದನ್ನು ಸ್ಥಳೀಯ ಗ್ಯಾಂಗ್‌ಸ್ಟರ್‌ಗಳು ದರೋಡೆ ಮಾಡಿರಬಹುದು ಎಂದೂ ಹೇಳಲಾಗುತ್ತಿದೆ. ಮರಡೋನಾ ಅವರ ಸಂಬಂಧಿಗಳೂ, ಈ ಟ್ರೋಫಿಯನ್ನು ಬ್ಯಾಂಕ್‌ನಿಂದ ಕದ್ದಿರಬಹುದು ಎಂಬ ಸಂಶಯ ವ್ಯಕ್ತಪಡಿಸುತ್ತಾರೆ.

ಮರಡೋನಾ ಅವರ ಇಬ್ಬರು ಪುತ್ರಿಯರನ್ನು ವಕೀಲ ಗಿಲ್ಲೆಸ್‌ ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ಟ್ರೋಫಿ ಕಳವಾಗಿರುವುದು ಇತ್ತೀಚೆಗಷ್ಟೇ ಗಮನಕ್ಕೆ ಬಂದಿದೆ. ಗೋಲ್ಡನ್‌ ಬಾಲ್‌ ತಮ್ಮ ಕುಟುಂಬಕ್ಕೆ ಸೇರಿದ ಕಾರಣ ಅದರ ಮಾರಾಟ ತಡೆಯಬೇಕು ಎಂಬುದು ಅವರ ಒತ್ತಾಯವಾಗಿದೆ ಎಂದಿದ್ದಾರೆ ಗಿಲ್ಲೆಸ್‌.

ಜೂನ್‌ 6ರಂದು ಹರಾಜು ನಿಗದಿಯಾಗಿದೆ. ಬಿಡ್‌ನಲ್ಲಿ ಪಾಲ್ಗೊಳ್ಳುವವರು ₹1.34 ಕೋಟಿ ಠೇವಣಿಯಾಗಿರುವಂತೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.