ಗುವಾಹಟಿ: ಫುಟ್‌ಬಾಲ್ ದಿಗ್ಗಜ ಡಿಯೆಗೊ ಮರಡೋನಾ ಅವರ ದುಬೈಯಲ್ಲಿ ಕಳವಾಗಿದ್ದ ಕೈಗಡಿಯಾರ ಅಸ್ಸಾಂನಲ್ಲಿ ಪತ್ತೆಯಾಗಿದೆ.
ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಕೈಗಡಿಯಾರವನ್ನು ಪತ್ತೆಹಚ್ಚಲಾಗಿದ್ದು, ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಜೆಂಟೀನಾದ ದಿವಂಗತ ಫುಟ್‌ಬಾಲ್ ಆಟಗಾರನ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಯುಎಇಯ ದುಬೈ ಕಂಪನಿಯಲ್ಲಿ ಆರೋಪಿಯು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.
ಹ್ಯುಬ್ಲೊ ಕೈಗಡಿಯಾರವನ್ನು ಸಂಗ್ರಹಿಸಲಾಗಿದ್ದ ತಿಜೋರಿಯನ್ನು ಆರೋಪಿಯು ದೋಚಿರುವ ಶಂಕೆಯಿದೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ ಜ್ಯೋತಿ ಮಹಾಂತ ಹೇಳಿದ್ದಾರೆ.
ಕಂಪನಿಯಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ ನಂತರ ಆರೋಪಿಯು,ತನ್ನ ತಂದೆಗೆ ಅನಾರೋಗ್ಯ ಎಂದು ರಜೆ ತೆಗೆದುಕೊಂಡು ಆಗಸ್ಟ್‌ನಲ್ಲಿ ಅಸ್ಸಾಂಗೆ ಮರಳಿದ್ದ. ಆರೋಪಿಯ ಬಗ್ಗೆ ಮಾಹಿತಿಯೊಂದಿಗೆ ದುಬೈ ಪೊಲೀಸರು ಭಾರತಕ್ಕೆ ತಲುಪಿದ ನಂತರ ಅಸ್ಸಾಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಆತನ ನಿವಾಸದಲ್ಲಿ ನಸುಕಿನ ಜಾವ 4 ಗಂಟೆಗೆ ಬಂಧಿಸಲಾಗಿದ್ದು, ಗಡಿಯಾರ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಭಯ ದೇಶಗಳ ಪೊಲೀಸ್ ಪಡೆಗಳ ನಡುವಿನ ಅಂತರರಾಷ್ಟ್ರೀಯ ಸಮನ್ವಯ ಒಳಗೊಂಡ ಕಾರ್ಯಾಚರಣೆ ಇದಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.