ADVERTISEMENT

ಯುರೋ ಕಪ್ ಫುಟ್‌ಬಾಲ್‌: ಜರ್ಮನಿ ಮಣಿಸಿ ಸೆಮಿಗೆ ಸ್ಪೇನ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 0:22 IST
Last Updated 6 ಜುಲೈ 2024, 0:22 IST
<div class="paragraphs"><p> ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಸ್ಟಟ್ಗಾರ್ಟ್‌ (ಜರ್ಮನಿ): ಸ್ಪೇನ್ ತಂಡವು ಶುಕ್ರವಾರ ನಡೆದ ಯುರೋ ಕಪ್ ಫುಟ್‌ಬಾಲ್‌ ಟೂರ್ನಿಯ ರೋಚಕ ಪಂದ್ಯದಲ್ಲಿ 2–1 ಗೋಲುಗಳಿಂದ ಆತಿಥೇಯ ಜರ್ಮನಿ ತಂಡವನ್ನು ಮಣಿಸಿ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 

ಪಂದ್ಯದ 51ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ ಅವರು ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಸಬ್‌ಸ್ಟಿಟ್ಯೂಟ್ ಆಟಗಾರ ಜೋಶುವಾ ಕಿಮ್ಮಿಚ್ ಅವರು 89ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಜರ್ಮನಿ ತಂಡ ಸಮಬಲ ಸಾಧಿಸಿತು.

ADVERTISEMENT

ಆದರೆ ಹೆಚ್ಚುವರಿ ಸಮಯದಲ್ಲಿ ಮೈಕೆಲ್ ಮೆರಿನೊ 119ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಪೇನ್ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಮೂರು ಬಾರಿ (1964, 2008, 2012) ಸ್ಪೇನ್ ಚಾಂಪಿಯನ್‌ ಆಗಿದೆ.

ಕೋಪ ಅಮೆರಿಕ: ಸೆಮಿಫೈನಲ್‌ಗೆ ಅರ್ಜೆಂಟೀನಾ: ಹೂಸ್ಟನ್‌ (ಎಪಿ): ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಈಕ್ವೆಡಾರ್‌ ತಂಡವನ್ನು ಮಣಿಸಿ ಕೋಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಪಂದ್ಯದ ನಿಗದಿ ಅವಧಿಯ ಆಟ 1–1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ರಿಂದ ಜಯ ಸಾಧಿಸಿತು.

ಅರ್ಜೆಂಟೀನಾ ಪರ ಮೊದಲ ಪೆನಾಲ್ಟಿ ಯತ್ನದಲ್ಲಿ ಲಯೋನಲ್‌ ಮೆಸ್ಸಿ ವಿಫಲರಾದರು. ಆದರೆ ಆರ್ಜೆಂಟೀನಾ ತಂಡದ ಗೋಲ್‌ ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್, ಈಕ್ವೆಡಾರ್‌ನ ಎರಡು ಪೆನಾಲ್ಟಿ ಯತ್ನಗಳನ್ನು ತಡೆದರು. ನಿಕೋಲಸ್ ಒಟಮೆಂಡಿ ಚೆಂಡನ್ನು ಗೋಲಿನೊಳಗೆ ಸೇರಿಸಿ, ಅರ್ಜೆಂಟೀನಾವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದ 35ನೇ ನಿಮಿಷ ಲಿಸಾಂಡ್ರೊ ಮಾರ್ಟಿನೆಜ್ ಅರ್ಜೆಂಟೀನಾಗೆ ಮುನ್ನಡೆ ಒದಗಿಸಿದರು. ಆದರೆ, ಕೆವಿನ್ ರಾಡ್ರಿಗಸ್‌ ದ್ವಿತೀಯಾರ್ಧದ ಆರಂಭದಲ್ಲೇ ಗೋಲು ಗಳಿಸಿ ಈಕ್ವೆಡಾರ್‌ ಸಮಬಲ ಸಾಧಿಸಲು ನೆರವಾದರು.

ಮೂರನೇ ಬಾರಿ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅರ್ಜೆಂಟೀನಾ, ಐದನೇ ಬಾರಿ ಕೋಪಾ ಅಮೆರಿಕ ಸೆಮಿಫೈನಲ್‌ ಪ್ರವೇಶಿಸಿದೆ. ನ್ಯೂಜೆರ್ಸಿಯಲ್ಲಿ ಮಂಗಳವಾರ ನಡೆಯುವ ಸೆಮಿಫೈನಲ್‌ನಲ್ಲಿ ವೆನೆಜುವೆಲಾ– ಕೆನಡಾ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.