ADVERTISEMENT

ಕೋಪಾ ಅಮೆರಿಕ ಫುಟ್‌ಬಾಲ್‌: ಮೆಸ್ಸಿ, ನೇಮರ್‌ಗೆ ಮೊದಲ ಪ್ರಶಸ್ತಿ ಕನಸು

ಅರ್ಜೆಂಟೀನಾ–ಬ್ರೆಜಿಲ್ ಫೈನಲ್‌ನಲ್ಲಿ ನಾಲ್ಕನೇ ಬಾರಿ ಪೈಪೋಟಿ

ಏಜೆನ್ಸೀಸ್
Published 9 ಜುಲೈ 2021, 16:50 IST
Last Updated 9 ಜುಲೈ 2021, 16:50 IST
ಲಯೊನೆಲ್ ಮೆಸ್ಸಿ
ಲಯೊನೆಲ್ ಮೆಸ್ಸಿ   

ರಿಯೊ ಡಿ ಜನೈರೊ: ಬಾರ್ಸಿಲೋನಾ ತಂಡದಲ್ಲಿ ಜೊತೆಯಾಗಿ ಕಣಕ್ಕೆ ಇಳಿದಿದ್ದ ಲಯೊನೆಲ್ ಮೆಸ್ಸಿ ಮತ್ತು ನೇಮರ್ ಅವರು ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಮುಖಾಮುಖಿಯಾಗಲಿದ್ದಾರೆ.

ಪ್ರಶಸ್ತಿಗಾಗಿ ನಡೆಯುವ ಸೆಣಸಾಟದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ ಆಡಲಿದ್ದು ಬ್ರೆಜಿಲ್ ಪಾಳಯದಲ್ಲಿ ನೇಮರ್ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಆಡಿರುವ ಸಂದರ್ಭದಲ್ಲಿ ಉಭಯ ತಂಡಗಳು ಈ ವರೆಗೆ ಕೋಪಾ ಅಮೆರಿಕ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿಲ್ಲ. ಆದ್ದರಿಂದ ಯಾವ ತಂಡ ಗೆದ್ದರೂ ಈ ಪೈಕಿ ಒಬ್ಬರಿಗೆ ಟೂರ್ನಿಯಲ್ಲಿ ಮೊದಲ ಯಶಸ್ಸು ಆಗಲಿದೆ.

ಮರಕಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಗೆಲ್ಲುವ ನೆಚ್ಚಿನ ಬಳಗಗಳಾಗಿವೆ. ಆದ್ದರಿಂದ ಫುಟ್‌ಬಾಲ್ ಪ್ರಿಯರ ಕುತೂಹಲ ಹೆಚ್ಚಾಗಿದೆ. ಆರು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮೆಸ್ಸಿ ಈ ಹಿಂದೆ ಮೂರು ಬಾರಿ ತಂಡವನ್ನು ಫೈನಲ್ ವರೆಗೆ ಕೊಂಡೊಯ್ದಿದ್ದಾರೆ. 34 ವರ್ಷದ ಅವರಿಗೆ ಇದು ಕೊನೆಯ ಕೋಪಾ ಅಮೆರಿಕ ಟೂರ್ನಿ ಆಗುವ ಸಾಧ್ಯತೆ ಇದ್ದು ಮುಂದಿನ ವರ್ಷದ ವಿಶ್ವಕಪ್ ಕೊನೆಯ ಪ್ರಮುಖ ಟೂರ್ನಿ ಆಗುವ ಸಾಧ್ಯತೆಗಳೇ ಹೆಚ್ಚು.

ADVERTISEMENT

2007, 2015 ಮತ್ತು 2016ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಮೆಸ್ಸಿ ಇದ್ದ ಅರ್ಜೆಂಟೀನಾ ರನ್ನರ್ ಅಪ್ ಆಗಿತ್ತು. 29 ವರ್ಷದ ನೇಮರ್‌ಗೆ ಇನ್ನೂ ಕೆಲವು ವರ್ಷ ಆಡಲು ಅವಕಾಶವಿದೆ. ಎರಡು ವರ್ಷಗಳ ಹಿಂದೆ 3–1ರಲ್ಲಿ ಪೆರು ವಿರುದ್ಧ ಜಯಿಸಿ ಬ್ರೆಜಿಲ್ ಪ್ರಶಸ್ತಿ ಗಳಿಸಿತ್ತಾದರೂ ಗಾಯದಿಂದಾಗಿ ಆಗ ನೇಮರ್ ತಂಡದಲ್ಲಿ ಇರಲಿಲ್ಲ.

ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾ ಮತ್ತು ಬ್ರೆಜಿಲ್ ಈ ಹಿಂದೆ ಮೂರು ಬಾರಿ ಫೈನಲ್‌ನಲ್ಲಿ ಸೆಣಸಿದ್ದವು. 1937ರಲ್ಲಿ ಬ್ರೆಜಿಲ್ ವಿರುದ್ಧ ಜಯ ಗಳಿಸಿ ಅರ್ಜೆಂಟೀನಾ ಮೊದಲ ಪ್ರಶಸ್ತಿ ಗೆದ್ದುಕೊಂಡಿತ್ತು. ಬ್ರೆಜಿಲ್ 2004 ಮತ್ತು 2007ರಲ್ಲಿ ಚಾಂಪಿಯನ್ ಆಗಿತ್ತು. ಈ ತಂಡಗಳು ಈ ವರೆಗೆ ವಿವಿಧ ಟೂರ್ನಿಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ಮುಖಾಮುಖಿಯಾಗಿವೆ. ‌ಮೂರನೇ ಸ್ಥಾನಕ್ಕಾಗಿ ಕೊಲಂಬಿಯ ಮತ್ತು ಪೆರು ಶನಿವಾರ ಸೆಣಸಲಿವೆ.

ಪಂದ್ಯ ಆರಂಭ: ಭಾನುವಾರ ಬೆಳಿಗ್ಗೆ 5.30 (ಭಾರತೀಯ ಕಾಲಮಾನ)

ನೇರ ಪ್ರಸಾರ ಸೋನಿ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.