ADVERTISEMENT

ಲಾ ಲಿಗಾ ಫುಟ್‌ಬಾಲ್‌: ಲಯೊನೆಲ್‌ ಮೆಸ್ಸಿ ಮಿಂಚು

ಏಕೈಕ ಗೋಲು ಗಳಿಸಿದ ಬಾರ್ಸಿಲೋನಾ ತಂಡದ ಆಟಗಾರ

ಏಜೆನ್ಸೀಸ್
Published 17 ಫೆಬ್ರುವರಿ 2019, 19:10 IST
Last Updated 17 ಫೆಬ್ರುವರಿ 2019, 19:10 IST
ವಲ್ಲಾಡೋಲಿಡ್‌ ಎದುರಿನ ಪಂದ್ಯದಲ್ಲಿ ಬಾರ್ಸಿಲೋನ ತಂಡದ ಲಯೊನೆಲ್‌ ಮೆಸ್ಸಿ (ಮಧ್ಯ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ವಲ್ಲಾಡೋಲಿಡ್‌ ಎದುರಿನ ಪಂದ್ಯದಲ್ಲಿ ಬಾರ್ಸಿಲೋನ ತಂಡದ ಲಯೊನೆಲ್‌ ಮೆಸ್ಸಿ (ಮಧ್ಯ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಮ್ಯಾಡ್ರಿಡ್‌: ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಲಯೊನೆಲ್‌ ಮೆಸ್ಸಿ, ಶನಿವಾರ ರಾತ್ರಿ ಕ್ಯಾಂಪ್‌ ನುವಾ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಮೆಸ್ಸಿ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು.

ಬಾರ್ಸಿಲೋನಾ 1–0 ಗೋಲಿನಿಂದ ವಲ್ಲಾಡೋಲಿಡ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 54ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. 24 ಪಂದ್ಯಗಳನ್ನು ಆಡಿರುವ ಈ ತಂಡ 16ರಲ್ಲಿ ಗೆದ್ದಿದೆ.

ADVERTISEMENT

ಬಲಿಷ್ಠ ಆಟಗಾರರನ್ನು ಹೊಂದಿರುವ ಬಾರ್ಸಿಲೋನಾ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇನ್ನೊಂದೆಡೆ ವಲ್ಲಾಡೋಲಿಡ್‌ ಆಟಗಾರರೂ ಮಿಂಚಿದರು. ಹೀಗಾಗಿ ಆರಂಭದ 40 ನಿಮಿಷಗಳ ಆಟ ಸಮಬಲದಿಂದ ಕೂಡಿತ್ತು. ನಂತರ ಬಾರ್ಸಿಲೋನಾ ಮಿಂಚಿತು. 43ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಲಭಿಸಿತು. ಈ ಅವಕಾಶದಲ್ಲಿ ಮೆಸ್ಸಿ ಚುರುಕಾಗಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಗಿರೋನಾ 2–1 ಗೋಲುಗಳಿಂದ ರಿಯಲ್‌ ಮ್ಯಾಡ್ರಿಡ್‌ಗೆ ಆಘಾತ ನೀಡಿತು.

ಗಿರೋನಾ ಪರ ಕ್ರಿಸ್ಟಿಯನ್‌ ಸ್ಟುವಾನಿ ಮತ್ತು ಪೋರ್ಟು ಕ್ರಮವಾಗಿ 65 ಮತ್ತು 75ನೇ ನಿಮಿಷಗಳಲ್ಲಿ ಗೋಲು ಹೊಡೆದರು.

ಮ್ಯಾಡ್ರಿಡ್‌ ತಂಡದ ಕ್ಯಾಸೆಮಿರೊ 25ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ತಂದುಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.