ಈಸ್ಟ್ ರುದರ್‌ಫೋರ್ಡ್ (ಅಮೆರಿಕ): ಲಯೊನೆಲ್ ಮೆಸ್ಸಿ ಹಾಲಿ ಯುರೊ ಕೂಟದಲ್ಲಿ ಮೊದಲ ಹಾಗೂ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 109ನೇ ಗೋಲು ಗಳಿಸಿದರು. ಅವರ ನೇತೃತ್ವದ ಆರ್ಜೆಂಟೀನಾ ತಂಡ, ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿ ಪಂದ್ಯದಲ್ಲಿ ಮಂಗಳವಾರ ರಾತ್ರಿ 2–0 ಗೋಲುಗಳಿಂದ ಕೆನಡಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿತು.
ಈ ಗೆಲುವು ಆರ್ಜೆಂಟೀನಾದ ಸ್ವಾತಂತ್ರ್ಯ ದಿನಾಚರಣೆಯಂದೇ ದಾಖಲಾಯಿತು. ಕಳೆದ ಎಂಟು ಆವೃತ್ತಿಗಳಲ್ಲಿ ಆರ್ಜೆಂಟೀನಾ ಆರನೇ ಬಾರಿ ಫೈನಲ್ ತಲುಪಿದಂತಾಗಿದೆ. ಫೈನಲ್ ಭಾನುವಾರ ನಡೆಯಲಿದೆ.
ಜೂಲಿಯನ್ ಅಲ್ವಾರೆಝ್ 22ನೇ ನಿಮಿಷ ಆರ್ಜೆಂಟೀನಾಕ್ಕೆ ಮುನ್ನಡೆ ಒದಗಿಸಿದರು. 51ನೇ ನಿಮಿಷ ಎನ್ಜೋ ಫೆರ್ನಾಂಡೀಸ್ ಅವರ ಗೋಲಿನ ಪ್ರಯತ್ನದಲ್ಲಿ ಚೆಂಡು ಎದುರಾಳಿ ಗೋಲ್ ಕೀಪರ್ ಮುಖಕ್ಕೆ ಬಡಿದು ಹಿಂದಕ್ಕೆ ಬಂದಿತು. ಆ ಅವಕಾಶವನ್ನು ಸದುಪಯೋಗಪಡಿಸಿದ ಮೆಸ್ಸಿ ಚೆಂಡನ್ನು ಗೋಲಿನೊಳಕ್ಕೆ ನಿರ್ದೇಶಿಸಿದರು. ಆರ್ಜೆಂಟೀನಾಕ್ಕೆ ತಮ್ಮ ಕೊನೆಯ 25 ಪಂದ್ಯಗಳಲ್ಲಿ ಅವರು ಗಳಿಸಿದ 28ನೇ ಗೋಲು ಇದು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮಾತ್ರ 130 ಗೋಲುಗಳೊಂದಿಗೆ, ಮೆಸ್ಸಿ ಅವರಿಗಿಂತ ಮುಂದೆ ಇದ್ದಾರೆ.
ಆರ್ಜೆಂಟೀನಾ ತನ್ನ ಅಜೇಯ ಓಟವನ್ನು 10 ಪಂದ್ಯಗಳಿಗೆ ವಿಸ್ತರಿಸಿತು. ಯುರೊ ಕಪ್‌ನಲ್ಲಿ ಈ ತಂಡ ಇದುವರೆಗೆ 15 ಬಾರಿ ಚಾಂಪಿಯನ್ ಆಗಿದೆ.
ಸತತ ಎರಡು ಯುರೊ ಕಪ್ ಮತ್ತು ಅದರ ಮಧ್ಯೆ ವಿಶ್ವಕಪ್ ಗೆದ್ದ ಸ್ಪೇನ್‌ನ ಸಾಧನೆ ಸರಿಗಟ್ಟಲು ಆರ್ಜೆಂಟೀನಾ ಯತ್ನಿಸುತ್ತಿದೆ. ‘ಲಾ ರೋಝಾ’ (ಸ್ಪೇನ್) ತಂಡ 2008 ಮತ್ತು 2012ರ ಯುರೊ ಚಾಂಪಿಯನ್‌ಷಿಪ್ ಜೊತೆಗೆ 2010ರ ವಿಶ್ವಕಪ್ ಗೆದ್ದುಕೊಂಡಿತ್ತು.
2026ರ ವಿಶ್ವಕಪ್ ಫೈನಲ್ ತಾಣವಾಗಿರುವ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಸೆಕೆಯ ನಡುವೆಯೂ 80,102 ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದು, ಸಿಂಹಪಾಲು ಮಂದಿ ಆರ್ಜೆಂಟೀನಾಕ್ಕೆ ಬೆಂಬಲ ನೀಡಿದರು. ಅಲ್ಲಲ್ಲಿ ಕೆಲ ಗುಂಪುಗಳು ಕೆನಡಾ ತಂಡವನ್ನು ಬೆಂಬಲಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.