ಕೋಲ್ಕತ್ತ: ಮೋಹನ್ ಬಾಗನ್ ಕ್ಲಬ್‌ನ ಆಡಳಿತ ಮಂಡಳಿಯು ತನ್ನ ಆಟಗಾರರು, ಕೋಚ್‌ಗಳು ಹಾಗೂ ನೆರವು ಸಿಬ್ಬಂದಿಯ ಬಾಕಿ ಹಣವನ್ನು ಮಂಗಳವಾರ ಪಾವತಿಸಿದೆ.
ಬಾಗನ್ ಕ್ಲಬ್, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಜೊತೆ ವಿಲೀನಗೊಳ್ಳುತ್ತಿದೆ.
ಎಟಿಕೆ–ಮೋಹನ್ ಬಾಗನ್ ಆಡಳಿತ ಮಂಡಳಿಯ ಮೊದಲ ಸಭೆಯು ಶುಕ್ರವಾರ ನಡೆಯಲಿದೆ. ಇದರಲ್ಲಿ ಏಳು ಮಂದಿ ನಿರ್ದೇಶಕರು ಪಾಲ್ಗೊಳ್ಳಲಿದ್ದು, ಉಭಯ ಕ್ಲಬ್‌ಗಳ ವಿಲೀನಕ್ಕೆ ಅಧಿಕೃತ ಮುದ್ರೆ ಬೀಳಲಿದೆ.
ಈ ಸಭೆಯ ವೇಳೆಕ್ಲಬ್‌ನ ಹೊಸ ಹೆಸರು, ಲೋಗೊ ಹಾಗೂ ಜೆರ್ಸಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಬಾಕಿ ಹಣವನ್ನು ಶೀಘ್ರವೇ ಪಾವತಿಸುವಂತೆ ಆಟಗಾರರು ಮೇ ತಿಂಗಳಿನಲ್ಲಿಕ್ಲಬ್‌ನ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು.
ಲಾಕ್‌ಡೌನ್‌ನಿಂದಾಗಿ ಕಚೇರಿ ಕೆಲಸಗಳು ಸ್ಥಗಿತವಾಗಿವೆ. ಹೀಗಾಗಿ ಹಣಸಂದಾಯ ಮಾಡಲು ವಿಳಂಬವಾಗುತ್ತಿದೆ. ಜುಲೈ 20ರೊಳಗೆ ಬಾಕಿ ಮೊತ್ತ ಪಾವತಿಸುವುದಾಗಿ ಮೋಹನ್ ಬಾಗನ್ ಕ್ಲಬ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಹೇಳಿತ್ತು.
‘ಕೊಟ್ಟ ಮಾತಿನಂತೆಯೇ ನಿಗದಿತ ಸಮಯದೊಳಗೆಆಟಗಾರರು, ಕೋಚ್‌ಗಳು ಹಾಗೂ ನೆರವು ಸಿಬ್ಬಂದಿಗೆ ಹಣ ಪಾವತಿಸಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಕ್ಲಬ್, ಪ್ರಕಟಣೆಯಲ್ಲಿ ತಿಳಿಸಿದೆ.
1889ರಲ್ಲಿ ಸ್ಥಾಪನೆಯಾಗಿದ್ದ ಬಾಗನ್,ಏಷ್ಯಾದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದೆನಿಸಿದೆ. ಕಲ್ಕತ್ತ ಫುಟ್‌ಬಾಲ್ ಲೀಗ್‌ನಲ್ಲಿ 30, ಐಎಫ್‌ಎ ಶೀಲ್ಡ್‌ನಲ್ಲಿ 22 ಹಾಗೂ ಐ ಲೀಗ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿ ಹಿರಿಮೆ ಹೊಂದಿದೆ.
ಡ್ಯುರಾಂಡ್ ಕಪ್‌ನಲ್ಲಿ 16 ಹಾಗೂ ರೋವರ್ಸ್ ಮತ್ತು ಫೆಡರೇಷನ್ ಕಪ್‌ಗಳಲ್ಲಿ ತಲಾ 14 ಟ್ರೋಫಿಗಳನ್ನು ಜಯಿಸಿ ದಾಖಲೆ ನಿರ್ಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.