ADVERTISEMENT

ಯುರೋ ಕಪ್‌ ಫುಟ್‌ಬಾಲ್‌: ನಾಕೌಟ್‌ ಘಟ್ಟಕ್ಕೆ ಸ್ಪೇನ್‌, ಇಟಲಿ

ಟೂರ್ನಿಯಿಂದ ಹೊರಬಿದ್ದ ಅಲ್ಬೇನಿಯಾ, ಕ್ರೊವೇಷಿಯಾ

ಎಪಿ
Published 25 ಜೂನ್ 2024, 20:30 IST
Last Updated 25 ಜೂನ್ 2024, 20:30 IST
ಗೋಲು ದಾಖಲಿಸಿದ ಸಂಭ್ರಮದಲ್ಲಿ ಫೆರಾನ್ ಟೊರೆಸ್ –ಎಎಫ್‌ಪಿ ಚಿತ್ರ
ಗೋಲು ದಾಖಲಿಸಿದ ಸಂಭ್ರಮದಲ್ಲಿ ಫೆರಾನ್ ಟೊರೆಸ್ –ಎಎಫ್‌ಪಿ ಚಿತ್ರ   

ಡಸೆಲ್‌ಡಾರ್ಫ್‌, ಜರ್ಮನಿ: ಫೆರಾನ್ ಟೊರೆಸ್ ಗಳಿಸಿದ ಗೋಲಿನ ನೆರವಿನಿಂದ ಸ್ಪೇನ್‌ ತಂಡವು ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ 1–0ಯಿಂದ ಅಲ್ಬೇನಿಯಾ ತಂಡವನ್ನು ಮಣಿಸಿ, ಅಜೇಯವಾಗಿ ನಾಕೌಟ್‌ ಹಂತಕ್ಕೆ ಮುನ್ನಡೆಯಿತು.

ಮೂರು ಬಾರಿ (1964, 2008, 2012) ಚಾಂಪಿಯನ್‌ ಆಗಿರುವ ಸ್ಪೇನ್‌ ತಂಡವು 2008ರ ಬಳಿಕ ಗುಂಪು ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು.

ಕ್ರೊವೇಷಿಯಾ ತಂಡವನ್ನು 3–0ಯಿಂದ ಮತ್ತು ಇಟಲಿಯನ್ನು 1–0ಯಿಂದ ಮಣಿಸಿದ್ದ ಸ್ಪೇನ್‌ 9 ಅಂಕಗಳನ್ನು ಪಡೆದು ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಅಲ್ಬೇನಿಯಾ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಡ್ರಾ ಸಾಧಿಸಿದರೆ, ಮತ್ತೆರಡರಲ್ಲಿ ಸೋತು 1 ಅಂಕ ಪಡೆದು, ಟೂರ್ನಿಯಿಂದಲೇ ಹೊರಬಿತ್ತು. ಮೊದಲ ಬಾರಿಗೆ ನಾಕೌಟ್‌ ಹಂತ ಪ್ರವೇಶಿಸುವ ಕನಸು ಈ ಬಾರಿಯೂ ಕೈಗೂಡಲಿಲ್ಲ.

ADVERTISEMENT

ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್‌ ತಂಡಕ್ಕೆ ಫೆರಾನ್‌ ಅವರು 11ನೇ ನಿಮಿಷದಲ್ಲಿ ಮುನ್ನಡೆಯನ್ನು ಒದಗಿಸಿದರು. ಸ್ಕೋರ್‌ ಸಮಬಲ ಸಾಧಿಸಲು ಅಲ್ಬೇನಿಯಾ ಆಟಗಾರರು ಕೊನೆಯ‌ವರೆಗೂ ಪ್ರಯತ್ನಿಸಿದರೂ ಸಫಲವಾಗಲಿಲ್ಲ.

ಸ್ಪೇನ್ ವಿರುದ್ಧ ಅಲ್ಬೇನಿಯಾ ಸೋತಿದ್ದರಿಂದ ಇಂಗ್ಲೆಂಡ್, ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ತಂಡಗಳು ತಮ್ಮ ಗುಂಪಿನ ಕೊನೆಯ ಪಂದ್ಯದ ಫಲಿತಾಂಶಕ್ಕೂ ಮುನ್ನವೇ ನಾಕೌಟ್‌ಗೆ ಅರ್ಹತೆಯನ್ನು ಖಚಿತಪಡಿಸಿಕೊಂಡವು.

ನಾಕೌಟ್‌ಗೆ ಇಟಲಿ: ಕ್ರೊವೇಷಿಯಾದೊಂದಿಗೆ 1–1ರಿಂದ ಡ್ರಾ ಸಾಧಿಸಿದ ಹಾಲಿ ಚಾಂಪಿಯನ್‌ ಇಟಲಿ ತಂಡವು ‘ಬಿ’ ಗುಂಪಿನಿಂದ ನಾಕೌಟ್‌ಗೆ ಅರ್ಹತೆ ಪಡೆಯಿತು.

ಅಲ್ಬೇನಿಯಾ ವಿರುದ್ಧ 2–1ರಿಂದ ಗೆದ್ದಿದ್ದ ಇಟಲಿ, ಸ್ಪೇನ್‌ ಎದುರು ಸೋಲು ಅನುಭವಿಸಿತ್ತು. ಒಟ್ಟಾರೆ 4 ಅಂಕಗಳನ್ನು ಸಂಪಾದಿಸಿರುವ ಇಟಲಿ, ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. 2 ಅಂಕಗಳನ್ನು ಪಡೆದ ಕ್ರೊವೇಷಿಯಾ ಟೂರ್ನಿಯಿಂದ ಹೊರನಡೆಯಿತು.

ರೋಚಕ ಹಣಾಹಣಿಯಲ್ಲಿ ಲುಕಾ ಮಾಡ್ರಿಕ್ 55ನೇ ನಿಮಿಷದಲ್ಲಿ ಕ್ರೊವೇಷಿಯಾ ಪರ ಗೋಲು ಗಳಿಸಿ, ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಇರುವಾಗ (90+8ನೇ ನಿಮಿಷ) ಇಟಲಿಯ ಮಟ್ಟಿಯಾ ಜಕಾಗ್ನಿ ಚೆಂಡನ್ನು ಗುರಿ ಸೇರಿಸಿ ಸ್ಕೋರ್‌ ಸಮಬಲಗೊಳಿಸಿದರು. 16ರ ಘಟ್ಟದ ಪಂದ್ಯದಲ್ಲಿ ಇಟಲಿಯು ಇದೇ 29ರಂದು ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ.

ಕ್ರೊವೇಷಿಯಾ ಮಾಡ್ರಿಕ್‌ (38 ವರ್ಷ 289 ದಿನ) ಅವರು ಇದೇ ವೇಳೆ ಯುರೋ ಕಪ್‌ನಲ್ಲಿ ಗೋಲು ದಾಖಲಿಸಿದ ಅತಿ ಹಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರವಾದರು. 2008ರಲ್ಲಿ ಆಸ್ಟ್ರಿಯಾದ ಇವಿಕಾ ವಾಸ್ಟಿಕ್ (38 ವರ್ಷ 257 ದಿನ ನಿರ್ಮಿಸಿದ ದಾಖಲೆಯನ್ನು ಅವರು ಮುರಿದರು.

ರೊನಾಲ್ಡೊ ಮೇಲೆ ಕಣ್ಣು: ಪೋರ್ಚುಗಲ್‌ ತಂಡವು ‘ಎಫ್‌’ ಗುಂಪಿನ ಕೊನೆಯ ಪಂದ್ಯದಲ್ಲಿ ಗುರುವಾರ ಜಾರ್ಜಿಯಾ ತಂಡವನ್ನು ಎದುರಿಸಲಿದೆ. ಪೋರ್ಚುಗಲ್‌ನ ಸ್ಟಾರ್‌ ಆಟಗಾರ 39 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ತಂಡದಲ್ಲಿದ್ದಾರೆ. ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಈಗಾಗಲೇ ನಾಕೌಟ್‌ಗೆ ಅರ್ಹತೆಯನ್ನು ಪಡೆದಿದೆ. ಟೂರ್ನಿಯಲ್ಲಿ ರೊನಾಲ್ಡೊ ಗೋಲು ಗಳಿಸಿದರೆ ಅತಿ ಹಿರಿಯ ಸ್ಕೋರರ್‌ ಎಂಬ ದಾಖಲೆ ಅವರ ಪಾಲಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.