ADVERTISEMENT

ಫುಟ್ಬಾಲ್‌: ಬಿಎಫ್‌ಸಿಗೆ ಇಂದು ಮುಂಬೈ ಸವಾಲು

ಪಿಟಿಐ
Published 1 ಅಕ್ಟೋಬರ್ 2024, 23:31 IST
Last Updated 1 ಅಕ್ಟೋಬರ್ 2024, 23:31 IST
ಬಿಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿ
ಬಿಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿ   

ಮುಂಬೈ: ಹ್ಯಾಟ್ರಿಕ್‌ ಗೆಲುವಿನೊಡನೆ ಇಂಡಿಯನ್ ಸೂಪರ್‌ ಲೀಗ್‌ ಅಭಿಯಾನ ಆರಂಭಿಸಿರುವ ಬೆಂಗಳೂರು ಎಫ್‌ಸಿ ತಂಡ, ಬುಧವಾರ ನಡೆಯುವ ಪಂದ್ಯದಲ್ಲಿ ಮುಂಬೈ ತಂಡವನ್ನು ಅದರ ತವರಿನಲ್ಲಿ ಎದುರಿಸಲಿದೆ. ಮುಂಬೈ ತಂಡ ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ.

ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ತಂಡ ಆಡಿದ ತವರಿನಿಂದ ಹೊರಗೆ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಡ್ರಾ ಮಾಡಿಕೊಂಡು ಒಂದು ಸೋತು ಒಂದು ಪಾಯಿಂಟ್‌ ಅಷ್ಟೇ ಹೊಂದಿದ್ದು 11ನೇ ಸ್ಥಾನದಲ್ಲಿದೆ.

ಆದರೆ ಮುಂಬೈ ತಂಡ, ಬೆಂಗಳೂರು ವಿರುದ್ಧ ಈ ಹಿಂದೆ ಆಡಿದ ಕೊನೆಯ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಜೊತೆಗೆ ತವರಿನಲ್ಲಿ ಉತ್ತಮ ಸಾಧನೆ ಹೊಂದಿದೆ. ಆಡಿದ ಕೊನೆಯ ಎಂಟು ಪಂದ್ಯಗಳಲ್ಲಿ ಸೋತಿಲ್ಲ.

ADVERTISEMENT

‘ನಾವು ಕೆಲವು ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ. ಎರಡು ಪಂದ್ಯಗಳಲ್ಲಿ ನಾವು ಐದು ಗೋಲುಗಳನ್ನು ಬಿಟ್ಟುಕೊಟ್ಟಿದ್ದೇವೆ. ಇದರಲ್ಲಿ ನಾಲ್ಕು ‘ಸೆಟ್‌ಪೀಸ್‌’ (ಕಾರ್ನರ್‌, ಫ್ರೀ ಕಿಕ್‌, ಥ್ರೊ ಇನ್‌) ಮೂಲಕ ನೀಡಿದ್ದು, ಇದು ನನಗೆ ಸ್ವೀಕಾರಾರ್ಹವಲ್ಲ’ ಎಂದು ಮುಂಬೈ ಸಿಟಿ ಹೆಡ್‌ ಕೋಚ್‌ ಪೀಟರ್‌ ಕ್ರಾಟ್ಕಿ ಹೇಳಿದರು.

‘ನಾವು ಎಲ್ಲಿ ಎಡವಿದ್ದೇವೆ ಮತ್ತು ಏಕೆ ಎಡವಿದ್ದೇವೆ ಎಂಬುದನ್ನು ವಿಶ್ಲೇಷಿಸಿ ಮುಂದಡಿ ಇಡಬೇಕು. ಇದು ತುಂಬಾ ಮಹತ್ವಪೂರ್ಣವಾದುದು’ ಎಂದು ಅವರು ಹೇಳಿದರು.

ಇನ್ನೊಂದೆಡೆ ಬಿಎಫ್‌ಪಿ ತಂಡದ ಹೆಡ್‌ ಕೋಚ್‌ ಜೆರಾರ್ಡ್‌ ಜಾರ್ಗೊಝಾ ಅವರು ತಂಡದ ಸ್ಫೂರ್ತಿಯುತ ಪ್ರದರ್ಶನಕ್ಕೆ ಸಂಸತ ವ್ಯಕ್ತಪಡಿಸಿದರು. ಆದರೆ ಈ ಹಂತದಲ್ಲಿ ನಾವು ಯಾವುದನ್ನೂ ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಆಡಿದರು.

ಟೂರ್ನಿಯಲ್ಲಿ ಈ ಎರಡು ತಂಡಗಳು 16 ಬಾರಿ ಮುಖಾಮುಖಿಯಾಗಿವೆ. ಮುಂಬೈ ತಂಡ ಎಂಟು ಬಾರಿ ಜಯಗಳಿಸಿದೆ. ಸುನಿಲ್ ಚೆಟ್ರಿ ನೇತೃತ್ವದ ‘ಬ್ಲೂಸ್’ ತಂಡ ಏಳು ಬಾರಿ ವಿಜಯಿಯಾಗಿದೆ. ಒಂದು ಪಂದ್ಯ ಡ್ರಾ ಆಗಿದೆ.

ಭಾರತ ತಂಡದ ಮಾಜಿ ಕ್ಯಾಪ್ಟನ್‌ ಸುನಿಲ್ ಚೆಟ್ರಿ, ಮುಂಬೈ ವಿರುದ್ಧ ಒಂಬತ್ತು ಬಾರಿ ಗೋಲು ಗಳಿಸಿದ್ದಾರೆ. ಒಂದೇ ಎದುರಾಳಿ ವಿರುದ್ಧ ಹತ್ತು ಬಾರಿ ಗೋಲು ಗಳಿಸಿದ ಮೊದಲನೆಯ ಆಟಗಾರ ಎಂಬ ಗೌರವ ಪಡೆಯುವ ಗುರಿಯೊಂದಿಗೆ ಅವರು ಕಣಕ್ಕಿಳಿಯಲಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.