ಗುವಾಹಟಿ: ತವರಿನ ಪ್ರೇಕ್ಷಕರಿಗೆ ಗೆಲುವಿನ ಸಿಹಿ ನೀಡುವ ನಾರ್ತ್ ಈಸ್ಟ್ ಯುನೈಟೆಡ್ ತಂಡದ ಆಟಗಾರರ ಕನಸು ನನಸಾಗಲಿಲ್ಲ.
ಶುಕ್ರವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡವನ್ನು ಮುಂಬೈ ಸಿಟಿ ಎಫ್‌ಸಿ ತಂಡ 1–0ಯಿಂದ ಮಣಿಸಿತು. ಪಂದ್ಯದ ಏಕೈಕ ಗೋಲನ್ನು ಅರ್ನಾಲ್ಡ್ ಇಸೊಕೊ ನಾಲ್ಕನೇ ನಿಮಿಷದಲ್ಲಿ ಗಳಿಸಿದರು.
ಎಟಿಕೆ–ಪುಣೆಗೆ ‘ಮೊದಲ’ ಜಯದ ಆಸೆ: ಮಾಜಿ ಚಾಂಪಿಯನ್ ಎಟಿಕೆ ತಂಡ ಶನಿವಾರ ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು ಎದುರಿಸಲಿದೆ. ಆತಿಥೇಯರು ತವರಿನಲ್ಲಿ ಮೊದಲ ಜಯದ ಆಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಇನ್ನೊಂದೆಡೆ ಪುಣೆ ತಂಡ ಸೋಲಿನ ಸುಳಿಯಿಂದ ಹೊರ ಬಂದು ಜಯದ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.
ಅಕ್ಟೋಬರ್ 31ರಂದು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಟಿಕೆ ತಂಡ ಬಿಎಫ್‌ಸಿಗೆ 2–1ರಿಂದ ಮಣಿದಿತ್ತು. ಇದು ತವರಿನಲ್ಲಿ ಎಟಿಕೆಯ ಮೂರನೇ ಸೋಲು ಆಗಿತ್ತು. ಈ ಕಹಿಯನ್ನು ಮರೆತು ಗೆಲುವಿನ ತೋರಣ ಕಟ್ಟಲು ಪಣತೊಟ್ಟು ಶನಿವಾರ ತಂಡ ಕಣಕ್ಕೆ ಇಳಿಯಲಿದೆ.
ಬಿಎಫ್‌ಸಿ ಎದುರಿನ ಪಂದ್ಯದ ಸಂದರ್ಭದಲ್ಲಿ ಗಾಯಗೊಂಡಿದ್ದ ನೈಜೀರಿಯಾ ಆಟಗಾರ ಕಲು ಉಚೆ ಇನ್ನೂ ಆರು ವಾರ ಅಂಗಣಕ್ಕೆ ಇಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದು ಎಟಿಕೆ ಪಾಳಯದಲ್ಲಿ ಚಿಂತೆಗೆ ಕಾರಣವಾಗಿದೆ. ಮ್ಯಾನ್ಯುಯೆಲ್ ಲಾನ್ಸರೊಟೆ ಮತ್ತು ಬಲ್ವಂತ್ ಸಿಂಗ್ ಅವರು ಆಕ್ರಮಣಕ್ಕೆ ಹೆಸರಾಗಿದ್ದು ಪುಣೆ ತಂಡಕ್ಕೆ ಸವಾಲಾಗಲಿದ್ದಾರೆ.
ನೀರಸ ಆಟವಾಡಿದ ಪುಣೆ: ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಎಫ್‌ಸಿ ಪುಣೆ ಸಿಟಿ ತಂಡದ ಈ ಬಾರಿ ಇದುವರೆಗೆ ನೀರಸ ಆಟವಾಡಿದೆ. ಆರು ಪಂದ್ಯಗಳ ಪೈಕಿ ನಾಲ್ಕನ್ನು ಸೋತಿರುವ ತಂಡ ಎರಡರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜಯದ ಖಾತೆ ತೆರೆದು ಸಮಾಧಾನಪಟ್ಟುಕೊಳ್ಳಲು ಪ್ರಯತ್ನಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.