ADVERTISEMENT

ಐಎಸ್‌ಎಲ್‌: ಜೆಎಫ್‌ಸಿ ಯುನೈಟೆಡ್ ಪಂದ್ಯ ಡ್ರಾ

ಪಿಟಿಐ
Published 1 ಡಿಸೆಂಬರ್ 2018, 20:13 IST
Last Updated 1 ಡಿಸೆಂಬರ್ 2018, 20:13 IST
ಚೆಂಡಿಗಾಗಿ ಉಭಯ ತಂಡಗಳ ಆಟಗಾರರು ಪೈಪೋಟಿ ನಡೆಸಿದ ಸಂದರ್ಭ
ಚೆಂಡಿಗಾಗಿ ಉಭಯ ತಂಡಗಳ ಆಟಗಾರರು ಪೈಪೋಟಿ ನಡೆಸಿದ ಸಂದರ್ಭ   

ಜಮ್‌ಶೆಡ್‌ಪುರ: ರೋಚಕ ಹಣಾಹಣಿಯಲ್ಲಿ ಸಮಬಲದಿಂದ ಕಾದಾಡಿದ ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಮತ್ತು ನಾರ್ತ್ ಈಸ್ಟ್ ಯುನೈಟೆಡ್‌ ತಂಡಗಳು ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡವು.

ಇಲ್ಲಿನ ಜೆ.ಆರ್‌.ಡಿ ಟಾಟಾ ಕ್ರೀಡಾ ಸಂಕೀರ್ಣದ ಅಂಗಣದಲ್ಲಿ ಶನಿವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟವಾಡಿದವು. ಆದರೆ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ.

ಇಂದು ಚಾಂಪಿಯನ್ನರಿಗೆ ಎಟಿಕೆ ಸವಾಲು: ಕಳ‍ಪೆ ಆಟದ ಮೂಲಕ ಐದನೇ ಆವೃತ್ತಿಯಲ್ಲಿ ಈ ವರೆಗೆ ನಿರಾಸೆ ಅನುಭವಿಸಿರುವ ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡ ಭಾನುವಾರದ ಪಂದ್ಯದಲ್ಲಿ ಅಟ್ಲೆಟಿಕೊ ಕೋಲ್ಕತ್ತವನ್ನು ಎದುರಿಸಲಿದೆ.

ADVERTISEMENT

ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರು ಕಳೆದ ಪಂದ್ಯದಲ್ಲಿ ಎಟಿಕೆ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿದ್ದರೆ. ಅಕ್ಟೋಬರ್‌ 25ರಂದು ಕೋಲ್ಕತ್ತದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಟಿಕೆ ತಂಡ ಚೆನ್ನೈಯಿನ್‌ ಎಫ್‌ಸಿಯನ್ನು 2–1ರಿಂದ ಮಣಿಸಿತ್ತು.

ಐಎಸ್‌ಎಲ್‌ನಲ್ಲಿ ಈ ವರೆಗೆ ಯಾವುದೇ ತಂಡ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿಲ್ಲ. ಯಾವ ತಂಡವೂ ಸುಲಭವಾಗಿ ಪ್ರಶಸ್ತಿಯನ್ನು ಬಿಟ್ಟುಕೊಡಲಿಲ್ಲ. ಆದರೆ ಚೆನ್ನೈಯಿನ್ ಎಫ್‌ಸಿ ಮಾತ್ರ ಈ ಬಾರಿ ಸುಲಭವಾಗಿ ಟೂರ್ನಿಯಿಂದ ಹೊರಬೀಳುವತ್ತ ಹೆಜ್ಜೆ ಹಾಕಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ತಂಡ ಆರರಲ್ಲಿ ಸೋತಿದೆ.

ಭಾನುವಾರವೂ ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆಯೇ.

ತವರಿನಲ್ಲಿ ಈ ಬಾರಿ ಒಂದು ಪಂದ್ಯವನ್ನೂ ಗೆಲ್ಲಲಾಗದ ತಂಡ ಮೊದಲ ಜಯದ ನಿರೀಕ್ಷೆಯೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿದೆ. ಇದನ್ನು ಸಾಧಿಸಬೇಕಾದರೆ ತಂಡದ ಎಲ್ಲ ವಿಭಾಗಗಳ ಆಟಗಾರರು ಕೂಡ ಕಠಿಣ ಪ್ರಯತ್ನ ನಡೆಸಬೇಕಾಗಿದೆ. ಬಲಿಷ್ಠ ಎಟಿಕೆ ಆತಿಥೇಯರ ಆಸೆಗೆ ಅಡ್ಡಿಯಾಗುವುದೇ ಎಂಬ ಕುತೂಹಲ ಈಗ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.