ಬ್ಯೂನೊ ಏರ್ಸ್: ಈ ತಿಂಗಳ 26ರಿಂದ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡೆಗಳಿಗೆ ಆಯ್ಕೆ ಮಾಡಿರುವ ಆರ್ಜೆಂಟೀನಾ ಫುಟ್‌ಬಾಲ್ ತಂಡದಲ್ಲಿ ಲಯೊನೆಲ್ ಮೆಸ್ಸಿ ಅವರಿಗೆ ಸ್ಥಾನ ನೀಡಿಲ್ಲ.
ಕೋಚ್ ಜೇವಿಯರ್ ಮಷೆರಾನೊ ಅವರು ವಿಶ್ವಕಪ್ ಗೆದ್ದ ತಂಡದಲ್ಲಿದ್ದ ನಾಲ್ವರಿಗೆ ಅವಕಾಶ ಕಲ್ಪಿಸಿದ್ದಾರೆ. ಇವರಲ್ಲಿ ಫಾರ್ವರ್ಡ್ ಆಟಗಾರ ಜೂಲಿಯನ್ ಅಲ್ವಾರೆಝ್ ಮತ್ತು ಡಿಫೆಂಡರ್ ನಿಕೋಲಸ್ ಒಟಾಮೆಂಡಿ ಒಳಗೊಂಡಿದ್ದಾರೆ.
37 ವರ್ಷದ ಮೆಸ್ಸಿ ಅವರು ಸದ್ಯ ಕೊಪಾ ಅಮೆರಿಕ ಟೂರ್ನಿಯಲ್ಲಿ ಆಡುತ್ತಿದ್ದಾರೆ. 2021ರಲ್ಲಿ ಈ ಟೂರ್ನಿಯಲ್ಲಿ ಗೆದ್ದ ಮೆಸ್ಸಿ ಅಲ್ಲಿ ತೋರಿದ ಸಾಧನೆಯು ಆರ್ಜೆಂಟೀನಾಕ್ಕೆ 2022ರ ವಿಶ್ವಕಪ್ ಗೆಲ್ಲಲು ಚಿಮ್ಮುಹಲಗೆಯಾಯಿತು.
ಒಲಿಂಪಿಕ್ಸ್‌ನಲ್ಲಿ ಅವರು ಒಮ್ಮೆ ಮಾತ್ರ (2008ರ ಬೀಜಿಂಗ್ ಕ್ರೀಡೆಗಳಲ್ಲಿ) ಭಾಗವಹಿಸಿದ್ದು ಆ ಸಲ ಆರ್ಜೆಂಟೀನಾ ಚಿನ್ನದ ಪದಕ ಗೆದ್ದುಕೊಂಡಿತ್ತು.
ಒಲಿಂಪಿಕ್ಸ್ ಪುರುಷರ ಫುಟ್‌ಬಾಲ್ ತಂಡ 23 ವರ್ಷದೊಳಗಿನವರದ್ದಾಗಿದ್ದು, ವಯೋಮಿತಿ ಮೀರಿದ ಮೂವರಿಗೆ ಆಡಲು ಅವಕಾಶವಿದೆ.
ಒಲಿಂಪಿಕ್ಸ್‌ಗೆ ಮೊದಲು ಆರ್ಜೆಂಟೀನಾ ತಂಡ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ. ಜುಲೈ 24ರಂದು ಮೊರಾಕೊ ವಿರುದ್ಧ ಈ ಪಂದ್ಯಗಳು ನಡೆಯಲಿವೆ. ಆರ್ಜೆಂಟೀನಾ ತಂಡ ಒಲಿಂಪಿಕ್ಸ್‌ನಲ್ಲಿ ‘ಬಿ’ ಗುಂಪಿನಲ್ಲಿದೆ. ಮೊರಾಕೊ, ಇರಾಕ್ ಮತ್ತು ಉಕ್ರೇನ್ ಗುಂಪಿನಲ್ಲಿರುವ ಇತರ ತಂಡಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.