ADVERTISEMENT

ಐಎಸ್ಎಲ್‌: ಜೆಎಫ್‌ಸಿ ಕನಸು ಭಗ್ನ

ಪಿಟಿಐ
Published 23 ಫೆಬ್ರುವರಿ 2019, 18:29 IST
Last Updated 23 ಫೆಬ್ರುವರಿ 2019, 18:29 IST
ಜೆಎಫ್‌ಸಿಯ ಮಾರಿಯೊ ಆರ್ಕಿಸ್ ಮತ್ತು ಚೆನ್ನೈಯಿನ್ ಎಫ್‌ಸಿಯ ರಫೆಲ್‌ ಆಗಸ್ಟೊ ಚೆಂಡಿಗಾಗಿ ಪೈಪೋಟಿ ನಡೆಸಿದರು –ಐಎಸ್‌ಎಲ್‌ ಚಿತ್ರ
ಜೆಎಫ್‌ಸಿಯ ಮಾರಿಯೊ ಆರ್ಕಿಸ್ ಮತ್ತು ಚೆನ್ನೈಯಿನ್ ಎಫ್‌ಸಿಯ ರಫೆಲ್‌ ಆಗಸ್ಟೊ ಚೆಂಡಿಗಾಗಿ ಪೈಪೋಟಿ ನಡೆಸಿದರು –ಐಎಸ್‌ಎಲ್‌ ಚಿತ್ರ   

ಚೆನ್ನೈ: ಪ್ಲೇ ಆಫ್ ಕನಸು ಹೊತ್ತು ಪೈಪೋಟಿಗೆ ಇಳಿದ ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡಕ್ಕೆ ಆತಿಥೇಯ ಚೆನ್ನೈಯಿನ್‌ ಎಫ್‌ಸಿ ಶನಿವಾರ ನಿರಾಸೆ ಮೂಡಿಸಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಈ ಎರಡು ತಂಡಗಳ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಮುಕ್ತಾಯಗೊಂಡಿತು.

ಪಾಯಿಂಟ್ ಪಟ್ಟಿಯ ಐದನೇ ಸ್ಥಾನದಲ್ಲಿರುವ ಜೆಎಫ್‌ಸಿಗೆ ಈ ಪಂದ್ಯ ಮತ್ತು ಉಳಿದಿರುವ ಮತ್ತೊಂದು ಪಂದ್ಯವನ್ನು ಗೆದ್ದರೆ ಪ್ಲೇ ಆಫ್‌ ಹಂತಕ್ಕೇರುವ ಅವಕಾಶವಿತ್ತು. ನಾಲ್ಕನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಶನಿವಾರದ ಪಂದ್ಯ ಡ್ರಾಗೊಂಡ ಕಾರಣ ನಿಟ್ಟುಸಿರು ಬಿಟ್ಟಿತು.

ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಈ ಪಂದ್ಯದೊಂದಿಗೆ ತವರಿನ ಅಭಿಯಾನ ಮುಗಿಸಿತು. ತಂಡದ ಕೊನೆಯ ಪಂದ್ಯ ಗೋವಾದಲ್ಲಿ ನಡೆಯಲಿದೆ. ಶನಿವಾರ ಪಂದ್ಯ ಮುಗಿದ ನಂತರ ಅಂಗಣಕ್ಕೆ ಸುತ್ತು ಹಾಕಿದ ಚೆನ್ನೈಯಿನ್ ಆಟಗಾರರು ಸ್ಥಳೀಯ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು. ಇಂಗ್ಲಿಷ್ ಮತ್ತು ತಮಿಳಿನಲ್ಲಿ ಬರೆದ ಬ್ಯಾನರ್‌ಗಳನ್ನು ಹಿಡಿದುಕೊಂಡಿದ್ದ ಅವರು ಪ್ರೇಕ್ಷಕರತ್ತ ಕೈ ಬೀಸಿದರು.

ADVERTISEMENT

ಕಳೆದ ಬಾರಿ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿದ ಚೆನ್ನೈಯಿನ್ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಆರಂಭದಿಂದಲೇ ನಿರಾಸೆ ಕಂಡಿತ್ತು. ಆಡಿದ 17 ಪಂದ್ಯಗಳ ಪೈಕಿ ಎರಡನ್ನಷ್ಟೇ ಗೆದ್ದಿದೆ.

ಪುಣೆ ಎಫ್‌ಸಿ–ಡೆಲ್ಲಿ ಡೈನಾಮೊಸ್ ಸೆಣಸು: ಪುಣೆಯ ಛತ್ರಪತಿ ಶಿವಾಜಿ ಅಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಪುಣೆ ಎಫ್‌ಸಿ ತಂಡವನ್ನು ಡೆಲ್ಲಿ ಡೈನಾಮೊಸ್ ಎದುರಿಸಲಿದೆ. ಡೈನಾಮೊಸ್‌ ತಂಡದ ಪ್ಲೇ ಆಫ್‌ ಕನಸು ಈಗಾಗಲೇ ಕಮರಿ ಹೋಗಿದೆ. ಪುಣೆ ಎಫ್‌ಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

ಲೀಗ್‌ ಹಂತದ ಆರಂಭದಲ್ಲಿ ಪುಣೆ ನಿರಂತರ ವೈಫಲ್ಯ ಕಂಡಿತ್ತು. ನಂತರ ಉತ್ತಮ ಸಾಮರ್ಥ್ಯ ತೋರಿತ್ತು. ಕಳೆದ ಆರು ಪಂದ್ಯಗಳಲ್ಲಿ ಸತತ ಜಯ ಗಳಿಸಿದ್ದರೂ ಆರಂಭದ ಹೊಡೆತ ತಂಡದ ಪ್ಲೇ ಆಫ್‌ ಹಂತದ ಆಸೆಗೆ ತಣ್ಣೀರು ಸುರಿದಿತ್ತು. ತಂಡ ಈಗ ಪಾಯಿಂಟ್‌ ಪಟ್ಟಿಯ ಏಳನೇ ಸ್ಥಾನದಲ್ಲಿದೆ. 16 ಪಂದ್ಯಗಳಲ್ಲಿ ಐದನ್ನು ಗೆದ್ದಿರುವ ತಂಡದ ಖಾತೆಯಲ್ಲಿ 19 ಪಾಯಿಂಟ್‌ಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.