ಬ್ಯಾಂಬೊಲಿಮ್: ಎಲ್ಲ ಅಡೆತಡೆಗಳನ್ನು ದಾಟಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಅಮೋಘ ಓಟದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮತ್ತೊಂದು ಭಾರಿ ಸವಾಲಿಗೆ ಸಜ್ಜಾಗಿದ್ದು ಶನಿವಾರ ನಡೆಯಲಿರುವ ಎರಡನೇ ಸಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ ಸೆಣಸಲಿದೆ.
ಟೂರ್ನಿಯ ಮಧ್ಯದಲ್ಲಿ ನಾರ್ತ್ ಈಸ್ಟ್ ಕೋಚ್ ತಂಡವನ್ನು ತೊರೆದ ಕಾರಣ ತಂಡಕ್ಕೆ ತರಬೇತಿ ನೀಡುವ ಜವಾಬ್ದಾರಿಯನ್ನು ಖಲೀದ್ ಜಮೀಲ್ ಅವರಿಗೆ ಒಪ್ಪಿಸಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಜಮೀಲ್ ತಂಡವನ್ನು ಪ್ಲೇ ಆಫ್ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕೋಚಿಂಗ್‌ನಲ್ಲಿ ತಂಡ ಒಂಬತ್ತು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಈ ಪೈಕಿ ಆರರಲ್ಲಿ ಜಯ ಗಳಿಸಿದೆ.
ಎಟಿಕೆ ಮೋಹನ್ ಬಾಗನ್ ತಂಡವೂ ಕಠಿಣ ಪರಿಸ್ಥಿತಿಯನ್ನು ಮೀರಿನಿಂತು ಬಂದಿದೆ. ಹೀಗಾಗಿ ಎರಡೂ ತಂಡಗಳ ನಡುವಿನ ಈ ಪಂದ್ಯ ರೋಚಕವಾಗುವ ನಿರೀಕ್ಷೆ ಇದೆ. ಎರಡೂ ತಂಡಗಳು ಆರಂಭದಲ್ಲಿ ಮುನ್ನಡೆ ಸಾಧಿಸಿದ ಪಂದ್ಯಗಳನ್ನು ಬಿಟ್ಟುಕೊಡದೇ ಇರುವುದು ವಿಶೇಷ. ನಾರ್ತ್ ಈಸ್ಟ್ ಮುನ್ನಡೆ ಸಾಧಿಸಿದ 13 ಪಂದ್ಯಗಳ ಪೈಕಿ ಎಂಟರಲ್ಲಿ ಗೆಲುವು ಸಾಧಿಸಿದೆ. ಎಟಿಕೆಎಂಬಿ 14 ಪಂದ್ಯಗಳಲ್ಲಿ ಆರಂಭಿಕ ಮುನ್ನಡೆ ಗಳಿಸಿ 12ರಲ್ಲಿ ಜಯ ಗಳಿಸಿದೆ. ಎರಡನ್ನು ಡ್ರಾ ಮಾಡಿಕೊಂಡಿದೆ.
ಆದರೆ ಹಿಂದಿನ ಮೂರು ಪಂದ್ಯಗಳಲ್ಲಿ ಎಟಿಕೆಎಂಬಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಳೆದುಕೊಂಡು ಲೀಗ್ ವಿಜೇತರ ಪಟ್ಟವನ್ನೂ ಕೈಚೆಲ್ಲಿತ್ತು. ಆದರೂ ಪ್ರಶಸ್ತಿ ಗೆಲ್ಲವು ನೆಚ್ಚಿನ ತಂಡ ಎಂದೇ ಅದು ಬಿಂಬಿತವಾಗಿದೆ.
ಎಟಿಕೆ ಮೋಹನ್ ಬಾಗನ್–ನಾರ್ತ್ ಈಸ್ಟ್ ಯುನೈಟೆಡ್
ಆರಂಭ: ಸಂಜೆ 7.30
ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೀಗ್ ಹಂತದಲ್ಲಿ ಉಭಯ ತಂಡಗಳ ಬಲಾಬಲ
ತಂಡ;ಪಂದ್ಯ;ಜಯ;ಡ್ರಾ;ಸೋಲು;ಗೋಲು;ಕೊಟ್ಟ ಗೋಲು;ಸ್ಥಾನ
ಎಟಿಕೆಎಂಬಿ;20;12;4;4;28;15;2
ನಾರ್ತ್ ಈಸ್ಟ್;20;8;9;3;31;25;3
ಲೀಗ್ ಹಂತದಲ್ಲಿ ಉಭಯ ತಂಡಗಳ ಸಾಧನೆ
ತಂಡ;ಪಾಸ್‌ಗಳು;ಕ್ರಾಸ್‌ಗಳು;ಸೇವ್‌ಗಳು;ಕ್ಲೀನ್‌ಶೀಟ್
ಎಟಿಕೆಎಂಬಿ;6530;229;50;10
ನಾರ್ತ್ ಈಸ್ಟ್;6433;210;37;5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.