ADVERTISEMENT

ಮಹಿಳಾ ಫುಟ್‌ಬಾಲ್ ಲೀಗ್‌ಗೆ ಒಡಿಶಾ ಆತಿಥ್ಯ

ಪಿಟಿಐ
Published 28 ಫೆಬ್ರುವರಿ 2021, 12:49 IST
Last Updated 28 ಫೆಬ್ರುವರಿ 2021, 12:49 IST
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಹಿಳಾ ಲೀಗ್‌ನಲ್ಲಿ ಕ್ರಿಪ್ಷಾ ಎಫ್‌ಸಿ (ಎಡ) ಮತ್ತು ಕೆಂಕ್ರೆ ಎಫ್‌ಸಿ ತಂಡಗಳ ನಡುವಿನ ಪಂದ್ಯದ ನೋಟ –ಪ್ರಜಾವಾಣಿ ಚಿತ್ರ
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಹಿಳಾ ಲೀಗ್‌ನಲ್ಲಿ ಕ್ರಿಪ್ಷಾ ಎಫ್‌ಸಿ (ಎಡ) ಮತ್ತು ಕೆಂಕ್ರೆ ಎಫ್‌ಸಿ ತಂಡಗಳ ನಡುವಿನ ಪಂದ್ಯದ ನೋಟ –ಪ್ರಜಾವಾಣಿ ಚಿತ್ರ   

ಒಡಿಶಾ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಆಯೋಜಿಸುವ ಮಹಿಳೆಯರ ಫುಟ್‌ಬಾಲ್ ಲೀಗ್‌ಗೆ ಈ ಬಾರಿ ಒಡಿಶಾ ಆತಿಥ್ಯ ವಹಿಸಲಿದೆ. ಟೂರ್ನಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಗೊಳಿಸಲಾಗುವುದು ಎಂದು ಫೆಡರೇಷನ್‌ ಭಾನುವಾರ ತಿಳಿಸಿದೆ.

‘ಭಾರತ ಫುಟ್‌ಬಾಲ್‌ಗೆ ಒಡಿಶಾ ಸರ್ಕಾರ ನೀಡಿರುವ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ಇದೀಗ ಮಹಿಳಾ ಫುಟ್‌ಬಾಲ್ ಲೀಗ್ ನಡೆಸಲು ಅದು ಮುಂದಾಗಿದೆ. ನವೀನ್ ಪಟ್ನಾಯಕ್, ವಿಶಾಲ್ ಕುಮಾರ್ ದೇವ್, ವಿನೀಲ್ ಕೃಷ್ಣ ಮತ್ತು ಸರ್ಕಾರದ ಕ್ರೀಡಾ ಇಲಾಖೆಯ ಪ್ರತಿಯೊಬ್ಬರಿಗೂ ನಾವು ಅಭಾರಿಯಾಗಿದ್ದೇವೆ’ ಎಂದು ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

‘ಅನೇಕ ಯುವ ಆಟಗಾರ್ತಿಯರಿಗೆ ಫುಟ್‌ಬಾಲ್‌ನಲ್ಲಿ ಸಾಧನೆ ಮಾಡಲು ಮಹಿಳಾ ಲೀಗ್ ನೆರವಾಗಿದೆ. ನೈಜ ಸಾಮರ್ಥ್ಯ ಮೆರೆಯಲು ಈ ಲೀಗ್ ಉತ್ತಮ ಹಾದಿ ಒದಗಿಸಿದೆ’ ಎಂದು ಅವರು ಹೇಳಿದರು.

ADVERTISEMENT

ಮುಂದಿನ ವರ್ಷ ಭಾರತದಲ್ಲಿ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಟೂರ್ನಿ ನಡೆಯಲಿದ್ದು ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಕೂಡ ಭಾರತದಲ್ಲೇ ನಡೆಯಲಿದೆ. ಈ ಟೂರ್ನಿಗಳಿಗಾಗಿ ಉತ್ತಮ ಆಟಗಾರ್ತಿಯರನ್ನು ಹುಡುಕಲು ಮಹಿಳಾ ಲೀಗ್‌ ನೆರವಾಗಲಿದೆ ಎಂಬುದು ಎಐಎಫ್‌ಎಫ್‌ ಆಶಯ.

‘ಭಾರತದಲ್ಲಿ ಕ್ರೀಡೆಗೆ, ವಿಶೇಷವಾಗಿ ಫುಟ್‌ಬಾಲ್‌ಗೆ ಉತ್ತಮ ವಾತಾವರಣ ನಿರ್ಮಿಸಲು ಒಡಿಶಾ ಆದ್ಯತೆ ನೀಡುತ್ತಿದೆ. ದೇಶದಲ್ಲಿ ಮಹಿಳಾ ಫುಟ್‌ಬಾಲ್ ಜೊತೆ ಒಡಿಶಾ ಹಿಂದಿನಿಂದಲೇ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದಿದೆ’ ಎಂದು ರಾಜ್ಯದ ಕ್ರೀಡಾ ಸಚಿವ ತುಷಾರ್ ಕಾಂತಿ ಬೆಹೆರಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.