ADVERTISEMENT

ಪುಟ್‌ಬಾಲ್ ಎಂಬ ಸುಂದರ ಕ್ರೀಡೆಯ ಅನಭಿಶಕ್ತ ದೊರೆ ಪೆಲೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 11:49 IST
Last Updated 30 ಡಿಸೆಂಬರ್ 2022, 11:49 IST
   

ಬ್ರೆಜಿಲ್‌ನ ಖ್ಯಾತ ಫುಟ್‌ಬಾಲ್ ಆಟಗಾರ ಪೆಲೆ, ಸಾರ್ವಕಾಲಿಕವಾಗಿ ಈ ಕ್ರೀಡೆಯಲ್ಲಿ ಅತಿ ಹೆಚ್ಚು ಪ್ರೀತಿ ಗಳಿಸಿದವರು. ಅವರು ಈ ಸುಂದರವಾದ ಆಟದ ಮಾಸ್ಟರ್ ಎಂದರೆ ತಪ್ಪಿಲ್ಲ.1958, 1962 ಮತ್ತು 1970ರಲ್ಲಿ ಬ್ರೆಜಿಲ್‌ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅದ್ಭುತವಾದ ಕೌಶಲ್ಯಗಳು ಅವರನ್ನು ದೇಶದ ಫುಟ್‌ಬಾಲ್‌ನ ಸುವರ್ಣ ಯುಗದ ಸಾಕಾರಕ್ಕೆ ನೆರವಾದವು.

ಅವರು 1977ರಲ್ಲಿ ನಿವೃತ್ತರಾಗುವ ಹೊತ್ತಿಗೆ 1,000ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದರು. ಬ್ರೆಜಿಲ್‌ ಪರ ಅವರು 77 ಗೋಲ್ ಗಳಿಸಿದ್ದರು, ಇತ್ತೀಚಿನ ವಿಶ್ವಕಪ್‌ನಲ್ಲಿ ನೇಮರ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.

ಆದರೆ, ಫುಟ್‌ಬಾಲ್ ವ್ಯಾಪ್ತಿಯನ್ನು ಮೀರಿ ಅವರ ವರ್ಚಸ್ಸು ಬೆಳೆಯಿತು. ಉದ್ಯಮದಲ್ಲೂ ಅವರ ಹೆಸರು ಅತ್ಯಂತ ಚಲಾವಣೆ ವಿಷಯವಾಯಿತು. ಕ್ರೀಡಾ ಉಡುಪುಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಕೈಗಡಿಯಾರಗಳಲ್ಲಿ ಅವರ ಚಿತ್ರ ಕಾಣಿಸಿಕೊಂಡವು.

ADVERTISEMENT

ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ (ಪೆಲೆ) ಅವರುಅಕ್ಟೋಬರ್ 1940ರಲ್ಲಿ ಜನಿಸಿದರು. 1956ರಲ್ಲಿ 15 ವರ್ಷ ವಯಸ್ಸಿನವನಾಗಿದ್ದಾಗ ಸ್ಯಾಂಟೋಸ್‌ಗಾಗಿ ತನ್ನ ಮೊದಲ ಪಂದ್ಯ ಆಡಿದ್ದರು.

ಇದಾದ ಒಂದೇ ವರ್ಷಕ್ಕೆ ರಾಷ್ಟ್ರೀಯ ತಂಡಕ್ಕೆ ಬುಲಾವ್ ನೀಡಲಾಯಿತು. ಅರ್ಜೆಂಟೀನಾ ವಿರುದ್ಧ ಮೊದಲ ಗೋಲ್ ಗಳಿಸಿದ್ದರು. 1958ರಲ್ಲಿ ಅವರು ಸ್ವೀಡನ್‌ನಲ್ಲಿ ನಡೆದ ವಿಶ್ವಕಪ್‌ಗೆ ಮೊದಲಬಾರಿಗೆ ಆಯ್ಕೆಯಾದರು.

ಫೈನಲ್‌ನಲ್ಲಿ ಅವರ ಭಾಗವಹಿಸುವಿಕೆಯು ಬ್ರೆಜಿಲ್‌ನಲ್ಲಿ ತೀವ್ರ ಚರ್ಚೆಯ ವಿಷಯವಾಗಿತ್ತು, ತೆಳ್ಳಗಿನ ಹದಿಹರೆಯದ ಈ ಯುವಕ ಫುಟ್‌ಬಾಲ್‌ಗೆ ಬೇಕಾದ ಫಿಟ್ನೆಸ್ ಹೊಂದಿದ್ದಾರೆಯೇ ಎಂದು ವಿಮರ್ಶಕರು ಪ್ರಶ್ನಿಸಿದ್ದರು.

ಸ್ವೀಡನ್‌ಗೆ ಆಗಮಿಸಿದ ನಂತರ ಮೊಣಕಾಲಿನ ಗಾಯಕ್ಕೆ ತುತ್ತಾದ ಪೆಲೆ ಬ್ರೆಜಿಲ್‌ನ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.

‘ಪೆಲೆ ಮೈದಾನಕ್ಕೆ ಇಳಿಯಲು ಸಮರ್ಥರಾಗಿಲ್ಲ’ಎಂಬ ಮನಶಾಸ್ತ್ರಜ್ಞರ ಸಲಹೆಯನ್ನು ಬದಿಗಿಟ್ಟು ತರಬೇತುದಾರ ವಿಸೆಂಟೆ ಫಿಯೋಲಾ ಅವರು, ಸೋವಿಯತ್ ಒಕ್ಕೂಟದ ವಿರುದ್ಧದ ಮೂರನೇ ಪಂದ್ಯಕ್ಕೆ ಪೆಲೆ ಅವರಿಗೆ ಅವಕಾಶ ನೀಡಿದ್ದರು. ಈ ಪಂದ್ಯದಲ್ಲಿ ಬ್ರೆಜಿಲ್, ಸೋವಿಯತ್ ತಂಡವನ್ನು 2–0 ಅಂತರದಿಂದ ಸೋಲಿಸಿತು. ಪಂದ್ಯದಲ್ಲಿ ಪೆಲೆ ಉತ್ತಮ ಪ್ರದರ್ಶನ ನೀಡಿದ್ದರು.

ಒಂದು ಹಂತದಲ್ಲಿ ತಂಡದಿಂದ ತೆಗೆದುಹಾಕಲು ಅಸಾಧ್ಯ ಎಂಬ ಮಟ್ಟಕ್ಕೆ ಪೆಲೆ ಬೆಳೆದರು. ವೇಲ್ಸ್ ವಿರುದ್ಧದ ಕ್ವಾರ್ಟರ್-ಫೈನಲ್‌ನಲ್ಲಿ ಗೆಲುವಿನ ಗೋಲು ಮತ್ತು ಫ್ರಾನ್ಸ್ ವಿರುದ್ಧ 5-2 ಅಂತರದ ಸೆಮಿ-ಫೈನಲ್ ವಿಜಯದಲ್ಲಿ ಹ್ಯಾಟ್ರಿಕ್ ಗೋಲು, ಸ್ವೀಡನ್ ವಿರುದ್ಧ ಗೆದ್ದ ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದರು.

ಕೇವಲ 17 ವರ್ಷದ ಪೆಲೆ ಫುಟ್‌ಬಾಲ್ ಇತಿಹಾಸದಲ್ಲೇ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.