ಮಾಸ್ಕೊ: ಎದುರಾಳಿ ಪೋಲೆಂಡ್ ತಂಡದ ಬಲಿಷ್ಠ ರಕ್ಷಣಾ ವಿಭಾಗವನ್ನು ಕಂಗೆಡಿಸಿದ ಸೆನೆಗಲ್, ವಿಶ್ವಕಪ್‌ನ ಮಂಗಳವಾರದ ಪಂದ್ಯದಲ್ಲಿ ಜಯ ಗಳಿಸಿತು. ಸ್ಪಾರ್ತಕ್ ಕ್ರೀಡಾಂಗಣದಲ್ಲಿ ನಡೆದ ‘ಎಚ್’ ಗುಂಪಿನ ಪಂದ್ಯದಲ್ಲಿ ಮೊದಲ ಗೋಲು ಕಾಣಿಕೆಯಾಗಿ ನೀಡಿದ ಪೋಲೆಂಡ್ 1–2ರಿಂದ ಸೋಲೊಪ್ಪಿಕೊಂಡಿತು.
ವಿಶ್ವಕಪ್‌ನಲ್ಲಿ ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದಾಗ ಸೆನೆಗಲ್‌ಗೆ ಪೋಲೆಂಡ್ ಒಮ್ಮೆಯೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಈ ‘ದಾಖಲೆ’ಯನ್ನು ಈ ಬಾರಿ ಸ್ಯಾಡಿಯೊ ಮಾನೆ ಮುರಿಯಲಿದ್ದಾರೆ ಎಂದು ಫುಟ್‌ಬಾಲ್ ಪಂಡಿತರು ಲೆಕ್ಕ ಹಾಕಿದ್ದರು. ಆದರೆ 37ನೇ ನಿಮಿಷದಲ್ಲಿ ಥಿಯಾಗೊ ಸಿಯೊನೆಕ್ ಸೆನೆಗಲ್‌ಗೆ ಗೋಲು ಕಾಣಿಕೆ ನೀಡಿದರು.
ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತ ಬಂದ ಇದ್ರಿಸಾ ಗುಯೆಸ್ ಗೋಲು ಪೆಟ್ಟಿಗೆಯತ್ತ ಬಲವಾಗಿ ಒದ್ದರು. ತಡೆಯಲು ಬಂದ ಥಿಯಾಗೊ, ಪೋಲೆಂಡ್ ತಂಡದ ಖಳನಾಯಕನಾದರು. ಅವರಿಗೆ ಸೋಕಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆಯ ಒಳಗೆ ಸೇರಿತು.
60ನೇ ನಿಮಿಷದಲ್ಲಿ ಮಬಯೆ ನಿಯಾಂಗ್ ಗಳಿಸಿದ ಗೋಲಿನ ಮೂಲಕ ಸೆನೆಗಲ್ ಮುನ್ನಡೆ ಹೆಚ್ಚಿಸಿಕೊಂಡಿತು. 86ನೇ ನಿಮಿಷದಲ್ಲಿ ಕ್ರಚೊವಾಕ್, ಪೋಲೆಂಡ್‌ಗೆ ಸಮಾಧಾನಕರ ಗೋಲು ಗಳಿಸಿಕೊಟ್ಟರು.
ದಾಖಲೆ ಸರಿಗಟ್ಟಿದ ರಾಬರ್ಟ್: ಪೋಲೆಂಡ್‌ನ ರಾಬರ್ಟ್ ಲ್ಯುವಾಂಡವ್‌ಸ್ಕಿ ಅವರಿಗೆ ಇದು 96ನೇ ಅಂತರರಾಷ್ಟ್ರೀಯ ಪಂದ್ಯ ಆಗಿತ್ತು. ಈ ಮೂಲಕ ಅವರು ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಐದನೇ ಆಟಗಾರ ಎಂಬ ದಾಖಲೆ ಸರಿಗಟ್ಟಿದರು. ಜಾಸೆಕ್ ಕ್ರಿನೊವೆಕ್ ಮತ್ತು ಜಾಸೆಕ್ ಬಾಕ್ ಕೂಡ ಇಷ್ಟೇ ಪಂದ್ಯಗಳನ್ನು ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.