ಮ್ಯಾಂಚೆಸ್ಟರ್: ಪ್ರೇಕ್ಷಕನ ಕೈಗೆ ಮೊಬೈಲ್ ಫೋನ್‌ನಿಂದ ಹೊಡೆದ ಮ್ಯಾಂಚೆಸ್ಟರ್ ಸಿಟಿ ತಂಡದ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎವರ್ಟನ್‌ನಲ್ಲಿ ಶನಿವಾರ ನಡೆದ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದ ನಂತರ ಅಂಗಣ ತೊರೆಯುವ ಸಂದರ್ಭದಲ್ಲಿ ಘಟನೆ ನಡೆದಿತ್ತು. ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ 0–1 ಗೋಲಿನಿಂದ ಎವರ್ಟನ್ ಎದುರು ಸೋತಿತ್ತು. ವಾಪಸ್ ಹೋಗುವ ವೇಳೆ ರೊನಾಲ್ಡೊ ಪ್ರೇಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
‘ತಂಡದ ಸದಸ್ಯರೊಬ್ಬರು ಹಲ್ಲೆ ಮಾಡಿದ್ದಾಗಿ ವರದಿಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದು ಸಿಸಿಟಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಮರ್ಸಿಸೈಡ್ ಪೊಲೀಸರು ತಿಳಿಸಿದ್ದಾರೆ.
ಕ್ಷಮೆ ಕೋರಿದ ರೊನಾಲ್ಡೊ
ಘಟನೆಯ ಬಗ್ಗೆ ಕ್ಷಮೆ ಕೋರಿರುವ ರೊನಾಲ್ಡೊ ‘ಕೆಲವು ಸಂದರ್ಭಗಳಲ್ಲಿ ಭಾವನೆಗಳನ್ನು ತಡೆದುಕೊಳ್ಳುವುದು ಸುಲಭ ಸಾಧ್ಯವಲ್ಲ. ಆದರೂ ಶನಿವಾರ ನಡೆದ ಘಟನೆಯ ಬಗ್ಗೆ ಪಶ್ಚಾತ್ತಾಪವಿದ್ದು ಪ್ರೇಕ್ಷಕನಿಂದ ಕ್ಷಮೆ ಕೋರುತ್ತೇನೆ. ಕ್ರೀಡಾ ಮನೋಭಾವದ ಭಾಗವಾಗಿ ಆ ಪ್ರೇಕ್ಷಕ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಪಂದ್ಯ ವೀಕ್ಷಿಸಲು ಬರಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.