ADVERTISEMENT

ಐಎಸ್‌ಎಲ್‌: ಇಂದು ಬಿಎಫ್‌ಸಿಗೆ ಪಂಜಾಬ್‌ ಸವಾಲು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 22:07 IST
Last Updated 29 ನವೆಂಬರ್ 2023, 22:07 IST
ಬೆಂಗಳೂರು ತಂಡದ ಸುನಿಲ್‌ ಚೆಟ್ರಿ
ಬೆಂಗಳೂರು ತಂಡದ ಸುನಿಲ್‌ ಚೆಟ್ರಿ   

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡದವರು ಗುರುವಾರ ತವರಿನಲ್ಲಿ ಪಂಜಾಬ್‌ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ತಂಡ ಈ ಋತುವಿನ ಎರಡನೇ ಜಯದ ನಿರೀಕ್ಷೆಯಲ್ಲಿದ್ದರೆ, ಪಂಜಾಬ್‌ ತಂಡ ಮೊದಲ ಗೆಲುವು ದಕ್ಕಿಸುವ ತವಕದಲ್ಲಿದೆ.

ಏಳು ಪಂದ್ಯಗಳನ್ನು ಆಡಿರುವ ಸುನಿಲ್‌ ಚೆಟ್ರಿ ಬಳಗ ಒಂದರಲ್ಲಿ ಗೆಲುವು ಸಾಧಿಸಿದ್ದರೆ, ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಪರಾಭವಗೊಂಡಿದೆ. ಒಟ್ಟು 7 ಅಂಕದೊಂದಿಗೆ ಬಿಎಫ್‌ಸಿ ಪಾಯಿಂಟ್‌ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ADVERTISEMENT

ಪಂಜಾಬ್‌ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಡ್ರಾ ಸಾಧಿಸಿದ್ದರೆ, ಉಳಿದ ನಾಲ್ಕು ಪಂದ್ಯಗಳಲ್ಲಿ ಸೋತಿದೆ. 3 ಅಂಕದೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ (12ನೇ) ಸ್ಥಾನದಲ್ಲಿದೆ.

ಸೈಮನ್ ಗ್ರೇಸನ್ ಮಾರ್ಗದರ್ಶನದ ಬೆಂಗಳೂರು ಎಫ್‌ಸಿ ತನ್ನ ಕೊನೆಯ ನಾಲ್ಕು ಪಂದ್ಯಗಳಿಂದ ಕೇವಲ ಮೂರು ಅಂಕಗಳನ್ನು ಗಳಿಸುವ ಮೂಲಕ ನಿರಾಸೆ ಅನುಭವಿಸಿದ್ದು, ಮತ್ತೆ ಪುಟಿದೇಳುವ ಹುಮ್ಮಸ್ಸಿನಲ್ಲಿದೆ.

‘ಐ- ಲೀಗ್‌ನಿಂದ ಐಎಸ್‌ಎಲ್‌ಗೆ ಪರಿವರ್ತನೆಗೊಳ್ಳುವಲ್ಲಿ ನಾವು ಕೆಲ ತೊಂದರೆ ಎದುರಿಸಿದ್ದೇವೆ. ಅದು ಫಲಿತಾಂಶದಲ್ಲಿ ಕಾಣಿಸುತ್ತಿದೆ. ಹಿಂದಿನ ಪಂದ್ಯಗಳ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನ ಲಯಕ್ಕೆ ಮರಳುತ್ತೇವೆ’ ಎಂದು ಪಂಜಾಬ್‌ನ ಮುಖ್ಯ ಕೋಚ್‌ ಸ್ಟೇಕೋಸ್ ವರ್ಗೆಟಿಸ್ ವಿಶ್ವಾಸ ವ್ಯಕ್ತಪಡಿಸಿದರು.

ಪಂದ್ಯ ಆರಂಭ: ರಾತ್ರಿ 8, ನೇರ ಪ್ರಸಾರ: ಸ್ಪೋರ್ಟ್ಸ್‌ 18 ನೆಟ್‌ವರ್ಕ್‌, ಜಿಯೊ ಸಿನೆಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.