ADVERTISEMENT

ಖಾಲಿ ಕ್ರೀಡಾಂಗಣದಲ್ಲಿ ಫೈನಲ್‌: ಎಟಿಕೆಗೆ ಮೂರನೇ ಐಎಸ್‌ಎಲ್ ಪ್ರಶಸ್ತಿ

ಪಿಟಿಐ
Published 14 ಮಾರ್ಚ್ 2020, 19:45 IST
Last Updated 14 ಮಾರ್ಚ್ 2020, 19:45 IST
ಗೋವಾದಲ್ಲಿ ಶನಿವಾರ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಎಟಿಕೆ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ
ಗೋವಾದಲ್ಲಿ ಶನಿವಾರ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಎಟಿಕೆ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ    

ಫತೋರ್ಡ, ಗೋವಾ: ಆರಂಭದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿ, ಕೋಚ್ ಬದಲಾದ ನಂತರ ಗೆಲುವಿನ ಹಾದಿಯಲ್ಲಿ ಸಾಗಿದ ಚೆನ್ನೈಯಿನ್ ಎಫ್‌ಸಿಯ ಕನಸು ಫೈನಲ್‌ನಲ್ಲಿ ಈಡೇರಲಿಲ್ಲ. ಎಟಿಕೆ ತಂಡದ ಆಕ್ರಮಣಕಾರಿ ಆಟಕ್ಕೆ ಬೆರಗಾದ ಚೆನ್ನೈಯಿನ್ ಸೋಲಿಗೆ ಶರಣಾಯಿತು.

ಎಟಿಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗಳಿಸಿತು. ಈ ತಂಡಕ್ಕೆ ಇದು ಮೂರನೇ ಚಾಂಪಿಯನ್‌ಷಿಪ್‌.

ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಚೆನ್ನೈಯಿನ್ ನಂತರ ಮಂಕಾಯಿತು. ನಿಧಾನಕ್ಕೆ ಆಟದ ಮೇಲೆ ಹಿಡಿತ ಸಾಧಿಸಿದ ಎಟಿಕೆ 3–1ರಲ್ಲಿ ಗೆಲುವು ಸಾಧಿಸಿ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಂಡಿತು. ಜೇವಿಯರ್ ಹೆರ್ನಾಂಡಸ್ (10 ಮತ್ತು 90ನೇ ನಿಮಿಷ) ಹಾಗೂ ಎಡು ಗಾರ್ಸಿಯಾ (48ನೇ ನಿ) ಗೆಲುವಿನ ರೂವಾರಿಗಳಾದರು. ಚೆನ್ನೈ ಪರ ಏಕೈಕ ಗೋಲು ಗಳಿಸಿದವರು ನಿರಿಜುಸ್ ವಲ್ಕಿಸ್‌ (69ನೇ ನಿ).

ADVERTISEMENT

2014ರ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಎಟಿಕೆ 2016ರಲ್ಲೂ 2020ರಲ್ಲೂ ಚಾಂಪಿಯನ್‌ ಆಗಿತ್ತು. ಚಿನ್ನದ ಬೂಟು ಪ್ರಶಸ್ತಿಗಾಗಿ ರಾಯ್ ಕೃಷ್ಣ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ನಿರಿಜುಸ್ ವಸ್ಕಿಸ್ ಗೋಲು ಗಳಿಸಿದ್ದರಿಂದ ಇಬ್ಬರ ಖಾತೆಗೆ 15 ಗೋಲುಗಳು ಸೇರಿದವು. ಹೀಗಾಗಿ ಪ್ರಶಸ್ತಿ ಹಂಚಿಕೊಂಡರು. ನಾರ್ತ್ ಈಸ್ಟ್ ಎಫ್‌ಸಿಯ ಸುಭಾಷಿಷ್ ರಾಯ್ ಚಿನ್ನದ ಗ್ಲೌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ಇರಲಿಲ್ಲ. ಆದ್ದರಿಂದ ಗ್ಯಾಲರಿಗಳು ಖಾಲಿಯಾಗಿದ್ದವು. ಆದರೂ ಆಟಗಾರರ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.