ADVERTISEMENT

ರಿಯಲ್‌ ಮ್ಯಾಡ್ರಿಡ್‌ಗೆ 14ನೇ ಕಿರೀಟ, ಲಿವರ್‌ಪೂಲ್‌ಗೆ ನಿರಾಸೆ

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್

ಏಜೆನ್ಸೀಸ್
Published 29 ಮೇ 2022, 12:36 IST
Last Updated 29 ಮೇ 2022, 12:36 IST
ಪ್ರಶಸ್ತಿ ಜಯಿಸಿದ ರಿಯಲ್ ಮ್ಯಾಡ್ರಿಡ್‌ ಆಟಗಾರರ ಸಂಭ್ರಮ– ಪಿಟಿಐ ಚಿತ್ರ
ಪ್ರಶಸ್ತಿ ಜಯಿಸಿದ ರಿಯಲ್ ಮ್ಯಾಡ್ರಿಡ್‌ ಆಟಗಾರರ ಸಂಭ್ರಮ– ಪಿಟಿಐ ಚಿತ್ರ   

ಪ್ಯಾರಿಸ್‌: ವಿನಿಸಿಯಸ್‌ ಜೂನಿಯರ್ ಗಳಿಸಿದ ಏಕೈಕ ಗೋಲಿನ ಬಲದಿಂದ ರಿಯಲ್ ಮ್ಯಾಡ್ರಿಡ್‌ ತಂಡವು ಯೂರೋಪಿಯನ್‌ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ ಟೂರ್ನಿಯ ಪ್ರಶಸ್ತಿಗೆ ಮುತ್ತಿಕ್ಕಿತು.

ಸ್ಟೇಡ್‌ ಡಿ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ರಿಯಲ್ ಮ್ಯಾಡ್ರಿಡ್‌ 1–0ಯಿಂದ ಲಿವರ್‌ಪೂಲ್ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ದಾಖಲೆಯ 14ನೇ ಬಾರಿ ‘ಯೂರೋಪಿನ ರಾಜ‘ ಎನಿಸಿಕೊಂಡಿತು.

ಉಭಯ ತಂಡಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 59ನೇ ನಿಮಿಷದಲ್ಲಿ ಫೆಡರಿಕೊ ವಾಲ್ವರ್ಡ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ ಬ್ರೆಜಿಲ್ ದೇಶದ ವಿನಿಸಿಯಸ್‌ ಮ್ಯಾಡ್ರಿಡ್‌ ತಂಡದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಸಮಬಲದ ಗೋಲು ದಾಖಲಿಸುವ ಲಿವರ್‌ಪೂಲ್ ಆಟಗಾರರ ಆಸೆ ಕೈಗೂಡಲಿಲ್ಲ.

ADVERTISEMENT

ಚಾಂಪಿಯನ್ಸ್‌ ಲೀಗ್‌ನಲ್ಲಿ ಆಡಿದ ಐದು ಫೈನಲ್‌ನಲ್ಲಿ ಲಿವರ್‌ಪೂಲ್ ತಂಡವು ಎರಡನೇ ಬಾರಿಸ್ಪೇನ್‌ ಮೂಲದ ರಿಯಲ್ ಮ್ಯಾಡ್ರಿಡ್‌ಗೆ ಮಣಿಯಿತು.

ಟಿಕೆಟ್‌ ಗೊಂದಲ;ಬಂಧನ: ಕ್ರೀಡಾಂಗಣದ ಹೊರಗೆ ಕೆಲವರು ಸೃಷ್ಟಿಸಿದ ಗೊಂದಲದ ಕಾರಣದಿಂದಾಗಿ ಪಂದ್ಯವು ನಿಗದಿತ ಸಮಯಕ್ಕಿಂತ 35 ನಿಮಿಷ ತಡವಾಗಿ ಆರಂಭವಾಯಿತು.

ಗೊಂದಲ ಸೃಷ್ಟಿಸಲು ಯತ್ನಿಸಿದ 39ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಫ್ರಾನ್ಸ್ ಪೊಲೀಸರು ತಿಳಿಸಿದ್ದಾರೆ.

ಭದ್ರತಾ ವೈಫಲ್ಯದಿಂದಾಗಿ ಅಸಲಿ ಟಿಕೆಟ್‌ ಹೊಂದಿರುವವರು ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಲಿವರ್‌ಪೂಲ್ ಆಡಳಿತ ದೂರಿದೆ. ನಕಲಿ ಟಿಕೆಟ್‌ ಹೊಂದಿದವರಿಂದ ಈ ಸಮಸ್ಯೆ ಸೃಷ್ಟಿಯಾಯಿತು ಎಂದು ಫ್ರಾನ್ಸ್ ಅಧಿಕಾರಿಗಳು ಹೇಳಿದ್ದಾರೆ.

ರಿಯಲ್ ಮ್ಯಾಡ್ರಿಡ್‌ ಜಯಿಸಿದ 14 ಪ್ರಶಸ್ತಿಗಳು

ವರ್ಷ;ಎದುರಾಳಿ;ಸ್ಥಳ

1955–56;ರೀಮ್ಸ್;ಫ್ರಾನ್ಸ್

1956;57;ಫಿಯೊರೆಂಟಿನಾ;ಸ್ಪೇನ್‌

1957–58;ಮಿಲಾನ್‌;ಬೆಲ್ಜಿಯಂ

1958–59;ರೀಮ್ಸ್;ಜರ್ಮನಿ

1959–60;ಐಂಥ್ರಾಚ್‌ ಫ್ರಾಂಕ್‌ಫರ್ಟ್‌;ಸ್ಕಾಟ್ಲೆಂಡ್‌

1965–66;ಪಾರ್ಟಿಜಾನ್;ಬೆಲ್ಜಿಯಂ

1997–98;ಯುವೆಂಟಸ್‌;ನೆದರ್ಲೆಂಡ್ಸ್

1999–2000;ವೆಲೆನ್ಸಿಯಾ;ಫ್ರಾನ್ಸ್

2001–02;ಬಾಯರ್‌ ಲೆವರ್‌ಕ್ಯೂಸೆನ್;ಸ್ಕಾಟ್ಲೆಂಡ್‌

2013–14;ಅಟ್ಲೆಟಿಕೊ ಮ್ಯಾಡ್ರಿಡ್‌;ಪೋರ್ಚುಗಲ್‌

2015–16;ಅಟ್ಲೆಟಿಕೊ ಮ್ಯಾಡ್ರಿಡ್‌;ಇಟಲಿ

2016–17;ಯುವೆಂಟಸ್;ವೇಲ್ಸ್

2017–18;ಲಿವರ್‌ಪೂಲ್‌;ಉಕ್ರೇನ್‌

2021–22;ಲಿವರ್‌ಪೂಲ್‌;ಫ್ರಾನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.